ಮುಂಬೈ: ಟೀಂ ಇಂಡಿಯಾ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅಗರವಾಲ್ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ರನ್ ಗಳಿಸುವತ್ತ ಹೆಜ್ಜೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಮಯಾಂಕ್ ಅಗರವಾಲ್ ಅಜೇಯ ಶತಕ (120) ಬಾರಿಸಿ ನೆರೆವಾದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇದು ಅವರ 4ನೇ ಶತಕವಾಗಿದೆ.
ಆರಂಭಿಕ ಆಟಗಾರ ಶುಬ್‌ಮನ್ ಗಿಲ್ 44 ರನ್ ಗಳಿಸಿ ಉತ್ತಮ ಆರಂಭ ನೀಡಿ ಔಟ್ ಆದರು. ಬಳಿಕ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಸೊನ್ನೆಗೆ ಔಟಾಗುವ ಮೂಲಕ ಭಾರತಕ್ಕೆ ಸಣ್ಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಾಯಿತು. 79 ರನ್‌ಗಳಿಗೆ 0 ವಿಕೆಟ್ ಇದ್ದ ಭಾರತ 80 ರನ್‌ಗೆ 3 ವಿಕೆಟ್ ಎಂಬ ಹಂತಕ್ಕೆ ತಲುಪಿತ್ತು. ಮೊದಲ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ (18) ಅವರ ಜತೆಗೆ ಮಯಾಂಕ್ ಅರ್ಧ ಶತಕದ ಜತೆಯಾಟ ನಡೆಸಿ ಕುಸಿತದಿಂದ ಪಾರು ಮಾಡಿದರು. ತಂಡದ ಮೊತ್ತ 160 ರನ್ ಗಳಿಸಿದಾಗ ಶ್ರೇಯಸ್ ಔಟಾದರು. ಬಳಿಕ ಬಂದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ (ಅಜೇಯ 25) ಜತೆಗೆ ಸೇರಿಕೊಂಡು ವಿಕೆಟ್ ಕಳೆದುಕೊಳ್ಳದೆ ಮಯಾಂಕ್ ಇನ್ನಿಂಗ್ಸ್ ಕಟ್ಟಿದರು.
ಮಳೆಯಿಂದಾಗಿ ದಿನದಾಟ 70 ಓವರ್ ಅಂತ್ಯವಾಗಿದ್ದು ಭಾರತ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಅಜಾಝ್ ಪಟೇಲ್ 4 ವಿಕೆಟ್ ಗಳನ್ನು ಪಡೆದಿದ್ದಾರೆ.