Saturday, December 14, 2024
Homeಕರಾವಳಿ ಕರ್ನಾಟಕಉಡುಪಿಮಲ್ಪೆಯ ತೇಲುವ ಸೇತುವೆಗೆ ಪ್ರವಾಸಿಗರ ನಿರ್ಬಂಧ

ಮಲ್ಪೆಯ ತೇಲುವ ಸೇತುವೆಗೆ ಪ್ರವಾಸಿಗರ ನಿರ್ಬಂಧ

ಉಡುಪಿ: ಮೇ 6ರಂದು ಮಲ್ಪೆ ಬೀಚ್‌ನಲ್ಲಿ ಲೋಕಾರ್ಪಣೆಗೊಂಡಿದ್ದ ರಾಜ್ಯದ ಮೊದಲ ತೇಲುವ ಸೇತುವೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕಳೆದ ಎರಡು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ದೈತ್ಯ ಅಲೆಗಳು ತೂಗುವ ಸೇತುವೆಗೆ ಅಪ್ಪಳಿಸುತ್ತಿರುವುದರಿಂದ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಭಾನುವಾರ ಸೇತುವೆಯ ಇಂಟರ್‌ಲಾಕ್ ಬಿಚ್ಚಲಾಗಿದ್ದು, ಕೆಲವು ಬ್ಲಾಕ್‌ಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಇದನ್ನು ನೋಡಿ ಕೆಲವರು ತೇಲುವ ಸೇತುವೆ ತುಂಡಾಗಿದೆ‌‌. ಪ್ರವಾಸಿಗರಿಗೆ ಸುರಕ್ಷತೆ ಇಲ್ಲ ಎಂದೆಲ್ಲ ವದಂತಿ ಹಬ್ಬಿಸುತ್ತಿದ್ದಾರೆ. ತೂಗುವ ಸೇತುವೆ ತುಂಡಾಗಿಲ್ಲ. ಸೇತುವೆ ಮೇಲಿಂದ ಬಿದ್ದು ಪ್ರವಾಸಿಗರಿಗೆ ಪ್ರಾಣಾಪಾಯವಾಗಿಲ್ಲ ಬೀಚ್ ನಿರ್ವಹಣೆ ಮಾಡುತ್ತಿರುವ ಸುದೇಶ್ ಶೆಟ್ಟಿ ತಿಳಿಸಿದರು.
ಸಮುದ್ರ ಪ್ರಕ್ಷುಬ್ಧಗೊಂಡಿರುವ ಕಾರಣ ತೂಗುವ ಸೇತುವೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಸೇಂಟ್ ಮೇರಿಸ್ ದ್ವೀಪಕ್ಕೂ ಪ್ರವೇಶ ಇಲ್ಲ. ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್ ನಿಲ್ಲಿಸಲಾಗಿದ್ದು, ನೀರಿಗಿಳಿಯಲು ಅನುಮತಿ ನೀಡಲಾಗುತ್ತಿಲ್ಲ. ಸಮುದ್ರ ಶಾಂತಗೊಂಡ ಬಳಿಕ, ಚಂಡ ಮಾರುತದ ಪ್ರಭಾವ ಇಳಿದ ಬಳಿಕ ಮತ್ತೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗುವುದು ಎಂದು ಸುದೇಶ್ ಶೆಟ್ಟಿ ತಿಳಿಸಿದರು.