Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಮಲ್ಲಶೆಟ್ಟಿಹಳ್ಳಿ: ಕೆಳಸೇತುವೆಗಾಗಿ ರೈತರ ಪ್ರತಿಭಟನೆ

ಮಲ್ಲಶೆಟ್ಟಿಹಳ್ಳಿ: ಕೆಳಸೇತುವೆಗಾಗಿ ರೈತರ ಪ್ರತಿಭಟನೆ

ದಾವಣಗೆರೆ: ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಕೆಳಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸುತ್ತ–ಮುತ್ತಲಿನ ಗ್ರಾಮಗಳ ನೂರಾರು ರೈತರು ಶುಕ್ರವಾರ ಪ್ರತಿಭಟಿಸಿದರು.

ವಾಹನಗಳ ಸಂಚಾರವನ್ನು ತಡೆದು ಪ್ರತಿಭಟಿಸಲು ಯತ್ನಿಸಿದ ರೈತರನ್ನು ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಳಿಯೇ ತಡೆದು ನಿಲ್ಲಿಸಿದರು. ಬಳಿಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಮಲ್ಲಶೆಟ್ಟಿಹಳ್ಳಿ, ಕರಿಲಕ್ಕೇನಹಳ್ಳಿ, ಬುಳ್ಳಾಪುರ, ಈಚಘಟ್ಟ, ದೊಡ್ಡರಂಗವ್ವನಹಳ್ಳಿ, ಜಂಪೇನಹಳ್ಳಿ, ಸುಲ್ತಾನಿಪುರ, ಕಬ್ಬೂರು, ಕೊಡಗನೂರು, ಬೊಮ್ಮೇನಹಳ್ಳಿ, ಹನುಮನಹಳ್ಳಿ ಸುತ್ತಲಿನ ರೈತರು ಬೆಳಿಗ್ಗೆ 10.30ರ ಸುಮಾರಿಗೆ ಹೆದ್ದಾರಿ ಬಳಿ ಜಮಾವಣೆಗೊಂಡರು. ಮಹಾತ್ವ ಗಾಂಧಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಿದ ರೈತರು, ಹೆದ್ದಾರಿಗೆ ಕೆಳಸೇತುವೆ ನಿರ್ಮಿಸದೇ ಇರುವುದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಲ್ಲಶೆಟ್ಟಿಹಳ್ಳಿ–ಹೊಸದುರ್ಗ–ಹುಳಿಯಾರು ರಸ್ತೆಯಲ್ಲಿ ದಿನಾಲೂ ನೂರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿ ರಸ್ತೆ ದಾಟುವಾಗ ಅಪಘಾತಗಳಾಗುತ್ತಿವೆ. 20ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಜಮೀನಿಗೆ ತೆರಳಿ ಮೇವು ತರಲು, ದನಕರುಗಳನ್ನು ಮೇಯಿಸಿಕೊಂಡು ಬರಬೇಕೆಂದರೆ 4 ಕಿ.ಮೀ ಸುತ್ತು ಹಾಕಬೇಕಾಗಿದೆ. ಹೀಗಾಗಿ ಇಲ್ಲಿ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಸ್ಪಂದಿಸಿಲ್ಲ. 2020ರ ಜುಲೈನಲ್ಲಿ ಪ್ರತಿಭಟಿಸಿದ್ದಾಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಥಳಕ್ಕೆ ಬಂದು ಶೀಘ್ರದಲ್ಲೇ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಗಿರೀಶ್‌ ಹಾಗೂ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಅವರು ಪ್ರತಿಭಟನೆಯನ್ನು ಕೈಬಿಡುವಂತೆ ಮಾಡಿದ ಮನವಿಗೆ ರೈತರು ಸ್ಪಂದಿಸಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸೇತುವೆ ನಿರ್ಮಿಸಿಕೊಡುವುದಾಗಿ ಲಿಖಿತವಾಗಿ ಭರವಸೆ ನೀಡಬೇಕು. ಇಲ್ಲದಿದ್ದರೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ತಡೆಯಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಕೆಲ ಸಮಯದ ಬಳಿಕ ರೈತರು ಹಾಗೂ ರೈತ ಮಹಿಳೆಯರು ಹೆದ್ದಾರಿಗೆ ನುಗ್ಗಿ ಪ್ರತಿಭಟಿಸಲು ಮುಂದಾದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಬಳಿಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರು ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಿದರು. ‘ಸಂಸದರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಹೆದ್ದಾರಿ ನಿರ್ವಹಣೆಯ ಗುತ್ತಿಗೆಯಲ್ಲಿ ಇಲ್ಲಿ ಕೆಳಸೇತುವೆ ನಿರ್ಮಿಸಲು ಅವಕಾಶ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ಕೆಳಸೇತುವೆ ನಿರ್ಮಿಸಿ, ಸಂಚರಿಸಲು ಅವಕಾಶ ಮಾಡಿಕೊಡಲಾಗುವುದು. ಪ್ರತಿಭಟನೆ ಹಿಂದಕ್ಕೆ ಪಡೆದು ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಲಿಖಿತವಾಗಿ ಭರವಸೆ ನೀಡಬೇಕು ಎಂದು ರೈತರು ಪಟ್ಟು ಹಿಡಿದಾಗ, ಕಚೇರಿಗೆ ಬಂದು ಪತ್ರವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಬಳಿಕ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಲಕ್ಕೇನಹಳ್ಳಿ ಹನುಮಂತಪ್ಪ, ಮುಖಂಡರಾದ ಈಚಘಟ್ಟದ ಕರಿಬಸಪ್ಪ ಎ.ಆರ್., ಮಲ್ಲಶೆಟ್ಟಿಹಳ್ಳಿ ಎಂ.ಸಿ.ಹನುಮೇಶ್, ದಾಗಿನಕಟ್ಟೆ ಎನ್. ಬಸವರಾಜ್, ಬುಳ್ಳಾಪುರದ ಹನುಮಂತಪ್ಪ, ಬುಳ್ಳಾಪುರದ ಪರಮೇಶ್ವರಪ್ಪ, ಕರೇಕಟ್ಟೆ ಕಲೀಮುಲ್ಲಾ, ಎಂ.ಜಿ. ನಾಗರಾಜ್, ಎಂ.ಜಿ.ಲೇಪಾಕ್ಷ, ದೊರೆಸ್ವಾಮಿ ಅವರೂ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.