Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಮಸಿ ಎರಚಿದ್ದ ಕನ್ನಡ ಹೋರಾಟಗಾರರ ಬಿಡುಗಡೆ

ಮಸಿ ಎರಚಿದ್ದ ಕನ್ನಡ ಹೋರಾಟಗಾರರ ಬಿಡುಗಡೆ

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಇಲ್ಲಿನ ವ್ಯಾಕ್ಸಿನ್‌ ಡಿಪೊದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಡಿ.13ರಂದು ಆಯೋಜಿಸಿದ್ದ ‘ಮಹಾಮೇಳಾವ’ದ ವೇಳೆ ಆ ಸಂಘಟನೆಯ ಅಧ್ಯಕ್ಷ ದೀಪಕ ದಳವಿ ಅವರ ಮುಖಕ್ಕೆ ಮಸಿ ಎರಚಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ನಾಲ್ವರು ಕನ್ನಡ ಹೋರಾಟಗಾರು ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾದರು.

ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್‌ ದೇಸಾಯಿ, ಅನಿಲ ದಡ್ಡಿಮನಿ, ಸಚಿನ ಮಠದ ಮತ್ತು ರಾಹುಲ ಕಲಕಾಂಬಕರ ಅವರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು.

ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಸಂಗೋಡಿ ಅವರು ಹೋರಾಟಗಾರರನ್ನು ಸಂಭ್ರಮದಿಂದ ಬರಮಾಡಿಕೊಂಡರು. ತಾವು ತಂದಿದ್ದ ಹೊಸ ಬಿಳಿ ಅಂಗಿಗಳನ್ನು ಹಾಕಿಸಿ, ಪಂಚೆಗಳನ್ನು ಉಡಿಸಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂಮಲೆ ಹಾಕಿ ಸ್ವಾಗತಿಸಿದರು. ‘ನಮ್ಮದೇ ನಮ್ಮದು ಬೆಳಗಾವಿ ನಮ್ಮದು’, ‘ರಕ್ತವನ್ನು ಚೆಲ್ಲುತ್ತೇವೆ; ಬೆಳಗಾವಿ ಪಡೆಯುತ್ತೇವೆ’ ಎಂಬಿತ್ಯಾದಿ ಘೋಷಣೆಗಳನ್ನು ಕೂಡಿದರು. ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ಭೀಮಾಶಂಕರ ಪಾಟೀಲ, ‘ಕನ್ನಡಿಗರನ್ನು ಕೆರಳಿಸುತ್ತಿರುವ ಎಂಇಎಸ್‌ ಪುಂಡರಿಗೆ ನಮ್ಮ ಕಾರ್ಯಕರ್ತರು ಮಸಿ ಬಳಿದು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದಾರೆ. ಹೋರಾಟದ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಸರ್ಕಾರವು ಬೆಳಗಾವಿಯ ವಿಷಯದಲ್ಲಿ ಗಟ್ಟಿತನದ ಕೆಲಸ ಮಾಡದಿರುವುದು ಖಂಡನೀಯ’ ಎಂದು ಆರೋಪಿಸಿದರು.

‘ಇಲ್ಲಿ ನಡೆದಿರುವ ವಿಧಾನಮಂಡಲ ಅಧಿವೇಶನಗಳಲ್ಲಿ ಗಡಿ ವಿಷಯದ ಬಗ್ಗೆ ಚರ್ಚಿಸದಿರುವುದು ಖಂಡನೀಯ. ಎಂಇಎಸ್‌ನವರಿಗೆ ಇಲ್ಲಿನ ರಾಜಕಾರಣಿಗಳು ಹಿಂಬಾಗಿಲಲ್ಲಿ ಬೆಂಬಲ ಕೊಡುತ್ತಿದ್ದಾರೆ’ ಎಂದು ದೂರಿದರು.

‘ನಮ್ಮ ಕಾರ್ಯಕರ್ತರ ವಿರುದ್ಧ ಪೊಲೀಸರು, ಒತ್ತಡ–ಒತ್ತಾಯಕ್ಕೆ ಮಣಿದು ಕೊಲೆ ಯತ್ನದ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಸರ್ಕಾರವು ಕೂಡಲೇ ಪ್ರಕರಣ ವಾಪಸ್ ಪಡೆಯಬೇಕು. ಕಾರಾಗೃಹಕ್ಕೆ ಕಳುಹಿಸಿದರೆಂದು ಕನ್ನಡಿಗರಾದ ನಾವು ಕುಗ್ಗುವುದಿಲ್ಲ’ ಎಂದು ತಿಳಿಸಿದರು.

‘ಸರ್ಕಾರವು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಎಂಇಎಸ್‌ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ‘ಎಂಇಎಸ್‌–ಶಿವಸೇನೆ ನಿಷೇಧ ಮಾಡುವವರಿಗೆ ಸೇನೆಯಿಂದ ₹ 1 ಕೋಟಿ ಬಹುಮಾನ ಕೊಡಲಾಗುವುದು. ‘ಕರ್ನಾಟಕದ ಭೀಷ್ಮ’ ಬಿರುದು ಕೊಟ್ಟು ಸನ್ಮಾನಿಸಲಾಗುವುದು. ಎಂಇಎಸ್‌ ಪುಂಡರ ವಿರುದ್ಧ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರವೇ ನಮ್ಮನ್ನು ಕಾರಗೃಹಕ್ಕೆ ಕಳುಹಿಸಿತೆಂದು ದುಃಖ ಪಡಬೇಕೋ, ಬಿಡುಗಡೆ ಆಗುತ್ತಿದ್ದೇವೆ ಎಂದು ಖುಷಿ ಪಡಬೇಕೋ ಗೊತ್ತಾಗುತ್ತಿಲ್ಲ. ಸರ್ಕಾರಿ ವಾಹನಗಳನ್ನು ಸುಟ್ಟ ಎಂಇಎಸ್‌ನವರ ವಿರುದ್ಧ ಏನು ಕ್ರಮ ವಹಿಸುತ್ತಾರೆ ಎಂದು ನೋಡಬೇಕಿದೆ. ಹೋರಾಟದಲ್ಲಿ ಕಾರಾಗೃಹ ವಾಸ ಸಾಮಾನ್ಯ. ಆದರೆ, ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸಂಪತ್‌ಕುಮಾರ್‌ ಪ್ರತಿಕ್ರಿಯಿಸಿದರು.

ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.