Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರಮಸೀದಿ ಪಕ್ಕದಲ್ಲೇ ದೇವಸ್ಥಾನ ಕಟ್ಟಿಸುತ್ತಿದ್ದ ಟಿಪ್ಪು: ಸಿದ್ದರಾಮಯ್ಯ

ಮಸೀದಿ ಪಕ್ಕದಲ್ಲೇ ದೇವಸ್ಥಾನ ಕಟ್ಟಿಸುತ್ತಿದ್ದ ಟಿಪ್ಪು: ಸಿದ್ದರಾಮಯ್ಯ

ಬೆಂಗಳೂರು: ‘ಟಿಪ್ಪು ಜಾತ್ಯತೀತ ರಾಜ ಮತ್ತು ಜನನಾಯಕ. ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೊ ಅದರ ಪಕ್ಕದಲ್ಲಿ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೂ ದಾಖಲೆಗಳಿವೆ. ಜಾತಿವಾದಿ ಸಂಘಟನೆ ಆರೆಸ್ಸೆಸ್ ಮತಾಂಧತೆ ಕಾರಣಕ್ಕೆ ಟಿಪ್ಪು ಅವರನ್ನು ವಿರೋಧಿಸುತ್ತದೆ. ಇದಕ್ಕೆ ನಾನು ಡೋಂಟ್ ಕೇರ್’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರೆಸ್ಸೆಸ್‌ ಯಾವತ್ತೂ ಬ್ರಿಟಿಷರ ವಿರುದ್ಧ ಹೋರಾಡಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ಆರೆಸ್ಸೆಸ್‌ನ ಒಬ್ಬನಾದರೂ ಸತ್ತಿರುವ ಉದಾಹರಣೆ ಇದ್ದರೆ ಹೇಳಲಿ’ ಎಂದರು.

‘ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ, ಅವರಿಗೆ ಯಾವತ್ತೂ ತಲೆತಗ್ಗಿಸದೆ ‌ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪುವಿನ ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದರು. ಅಲ್ಲದೆ, ‌ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕೂಡಾ ಆರಂಭಿಸಿದ ಹೆಮ್ಮೆ ನಮ್ಮದು. ದೇಶವನ್ನು ದಾಸ್ಯಕ್ಕೆ ದೂಡಿದ ಬ್ರಿಟಿಷರ ಪರವಾಗಿ ನಾವು ಇರಬೇಕೋ. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಡಿದ ಟಿಪ್ಪು ಸುಲ್ತಾನ್ ಪರವಾಗಿ ಇರಬೇಕೋ’ ಎಂದು ಪ್ರಶ್ನಿಸಿದ ಅವರು, ‘ಬ್ರಿಟಿಷರ ವಿರುದ್ಧ ಅವತ್ತೂ ಬಾಯಿ ಬಿಡದ, ಇವತ್ತೂ ಬಾಯಿ ಬಿಡದ ಆರೆಸ್ಸೆಸ್‌ ಟಿಪ್ಪುವನ್ನು ವಿರೋಧಿಸುವುದು ಹಾಸ್ಯಾಸ್ಪದ’ ಎಂದರು.

‘ಆರೆಸ್ಸೆಸ್‌ ಹೇಳುವ ಸುಳ್ಳುಗಳಿಗೆ ಸೊಪ್ಪು ಹಾಕುವ ಅಗತ್ಯ ಇಲ್ಲ. ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು’ ಎಂದರು.

ಪರಿಶಿಷ್ಟ ಮುಖ್ಯಮಂತ್ರಿ ವಿಚಾರದ ಬಗ್ಗೆ ಬಿಜೆಪಿ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ‘ಅತಿ ಹೆಚ್ಚು ಮಂದಿ ಪರಿಶಿಷ್ಟರು ಮುಖ್ಯಮಂತ್ರಿ ಆಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ನಮ್ಮ ಸರ್ಕಾರ ಇರುವ ಪಂಜಾಬ್‌ನ ಮುಖ್ಯಮಂತ್ರಿ ಪರಿಶಿಷ್ಟ ಸಮುದಾಯದವರು. ಬಿಜೆಪಿಗರು ಬೊಮ್ಮಾಯಿ ಅವರನ್ನು ಕೆಳಗಿಳಿಸಿ ಪರಿಶಿಷ್ಟರನ್ನು ಮುಖ್ಯಮಂತ್ರಿ ಮಾಡಲಿ’ ಎಂದು ಮರು ಸವಾಲು ಹಾಕಿದರು.