Saturday, December 14, 2024
Homeಸುದ್ದಿರಾಷ್ಟ್ರೀಯಮಹಿಳೆಗೆ ಮನ್ನಣೆ: ಪ್ರಿಯಾಂಕ ಭರವಸೆ

ಮಹಿಳೆಗೆ ಮನ್ನಣೆ: ಪ್ರಿಯಾಂಕ ಭರವಸೆ

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ರಚಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಶೇ 40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕೆ ಇಳಿಸಲಾಗುವುದು ಎಂದು ಪ್ರಿಯಾಂಕಾ ಅವರು ಕಳೆದ ತಿಂಗಳು ಘೋಷಿಸಿದ್ದರು. ಶೇ 50ರಷ್ಟಿರುವ ಮಹಿಳೆಯರನ್ನು ಅಧಿಕಾರದ ಪೂರ್ಣ ಪ್ರಮಾಣದ ಪಾಲುದಾರರನ್ನಾಗಿ ಮಾಡುವುದು ಇದರ ಉದ್ಧೇಶ ಎಂದು ಅವರು ಹೇಳಿದ್ದರು.

‘ಉತ್ತರ ಪ್ರದೇಶದ ನನ್ನ ಪ್ರೀತಿಯ ಸಹೋದರಿಯರೇ, ನಿಮ್ಮ ಪ್ರತಿ ದಿನವೂ ಸಂಘರ್ಷವೇ ಆಗಿದೆ. ಇದನ್ನು ಅರ್ಥ ಮಾಡಿಕೊಂಡೇ ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ತಯಾರಿಸುವ ನಿರ್ಧಾರ ಕೈಗೊಂಡಿತು’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಹಿಳೆಯರಿಗೆ ಪಕ್ಷವು ನೀಡಿರುವ ಭರವಸೆಗಳ ಪಟ್ಟಿಯನ್ನೂ ಪ್ರಿಯಾಂಕಾ ಅವರು ಟ್ವೀಟ್‌ ಮಾಡಿದ್ಧಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ ₹10 ಸಾವಿರ ಗೌರವಧನ, ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಶೇ 40ರಷ್ಟು ಹುದ್ದೆಗಳಿಗೆ ಮಹಿಳೆಯರ ನೇಮಕ, ವಿಧವೆಯರಿಗೆ ₹1,000 ಮಾಶಾಸನ, ವೀರ ವನಿತೆಯರ ಹೆಸರಿನಲ್ಲಿ ರಾಜ್ಯದಲ್ಲಿ 75 ಕೌಶಲ ಶಾಲೆಗಳ ಸ್ಥಾಪನೆ ಕಾಂಗ್ರೆಸ್‌ನ ಭರವಸೆಗಳಲ್ಲಿ ಸೇರಿವೆ.

ಕಾಂಗ್ರೆಸ್‌ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಹೇಳಿಕೊಳ್ಳುವಂತಹ ನೆಲೆಯೇನೂ ಇಲ್ಲ. ರಾಜ್ಯದ ಉಸ್ತುವಾರಿಯಾಗಿರುವ ಪ್ರಿಯಾಂಕಾ ಅವರು ಪಕ್ಷವನ್ನು ಪುನಶ್ಚೇತನಗೊಳಿಸುವ ಅಸಾಧಾರಣ ಹೊಣೆಯನ್ನು ವಹಿಸಿಕೊಂಡಿದ್ಧಾರೆ. ಮಹಿಳಾ ಮತದಾರರ ಓಲೈಕೆಯ ಕಾರ್ಯತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ.