Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಮೀಸಲಾತಿಗೆ ಸ್ವಾತಂತ್ರ್ಯ ಹೋರಾಟಗಾರರ ಆಗ್ರಹ

ಮೀಸಲಾತಿಗೆ ಸ್ವಾತಂತ್ರ್ಯ ಹೋರಾಟಗಾರರ ಆಗ್ರಹ

ಬೆಳಗಾವಿ: ‘ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಶಿಕ್ಷಣ ಹಾಗೂ ಸರ್ಕಾರಿ ನೌಕರಿಯಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘದವರು ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ನಮ್ಮ ಸಮಸ್ತ ಕುಟುಂಬಗಳನ್ನು ‘ಸ್ವಾತಂತ್ಯ ಹೋರಾಟಗಾರರ ಪರಿವಾರ’ ಎಂದು ಘೋಷಿಸಬೇಕು. ನಮ್ಮ ವಂಶಸ್ಥರಿಗೆ, ಗಂಡು ಹಾಗೂ ಹೆಣ್ಣು ಮಕ್ಕಳಿಗೆಲ್ಲರಿಗೂ ಮಾಸಿಕ ಗೌರವಧನ ಮತ್ತು ಗುರುತಿನ ಚೀಟಿ ನೀಡಬೇಕು. ‘ಉತ್ತರಾಧಿಕಾರಿಗಳ ಪ್ರಮಾಣಪತ್ರ’ವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವರಿಗೂ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

‘ಸ್ವಾತಂತ್ರ್ಯ ಯೋಧರ ಕುಟುಂಬದವರ ಮನೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಒದಗಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಅಂತ್ಯಸಂಸ್ಕಾರಕ್ಕೆ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವನ್ನು ₹ 4ಸಾವಿರದಿಂದ ₹10ಸಾವಿರಕ್ಕೆ ಏರಿಸಬೇಕು. ಹೋರಾಟಗಾರರ ವಿಧವಾ ಪತ್ನಿಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಬಸ್ ಪಾಸ್ (ಈಗ ನೀಡುತ್ತಿರುವ ₹ 2ಸಾವಿರ ಕೂಪನ್ ವಾಪಸ್ ಪಡೆದು) ಕೊಡಬೇಕು ಮತ್ತು ಸಹಾಯಕರಿಗೂ ಅವಶಾಶ ನೀಡಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಬೇಕು. ಉಚಿತವಾಗಿ ನಿವೇಶನಗಳನ್ನು ಕೊಡಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷ ಮಳಪ್ಪ ಶಿದ್ದಪ್ಪ ಕೊಪ್ಪದ, ಉಪಾಧ್ಯಕ್ಷ ಅರುಣಕುಮಾರ ಆರ್.ಮನ್ನಂಗಿ ಮತ್ತು ಪ್ರಧಾನ ಕಾರ್ಯದರ್ಶಿ ಶಿವಯೋಗಯ್ಯ ಬಿ. ಲೋಕನಗೌಡ್ರ ನೇತೃತ್ವ ವಹಿಸಿದ್ದರು.