ಉಡುಪಿ: ದೇವಸ್ಥಾನ, ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಮರು ವ್ಯಾಪಾರ ನಡೆಸಲು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಶನಿವಾರ ‘ಭೂ ಸುಧಾರಣಾ ಕಾಯ್ದೆ ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಎಲ್ಲರೂ ಸ್ವತಂತ್ರರು, ಯಾರು ಯಾರಿಗೂ ಬೆದರಿಕೆ ಹಾಕುವಂತಿಲ್ಲ. ವ್ಯಾಪಾರ ವಹಿವಾಟು ನಡೆಸಲು ಬೆದರಿಕೆ ಹಾಕುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿಗೆ ವಿರುದ್ಧವಾದ ನಡವಳಿಕೆ ಸರಿಯಲ್ಲ. ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಿ. ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಬೋಧಿಸಿ. ಆದರೆ, ತಾರತಮ್ಯ ಮಾಡಬೇಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಬಹಿಷ್ಕಾರ ಅಭಿಯಾನ:
ಜಾತ್ರೆ, ಮಾರಿ ಪೂಜೆ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬಾರದು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.
ಹಿಜಾಬ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ಬೆಲೆ ಕೊಡದೆ ಬಂದ್ ಮಾಡಿದ ಮುಸ್ಲಿಂ ವರ್ತಕರ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸೋಣ ಎಂದು ಕರೆ ನೀಡಲಾಗಿದೆ.
ಹೆಬ್ರಿ ತಾಲ್ಲೂಕಿನ ಶಿವಪುರ ಶಂಕರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಬ್ಯಾನರ್ ಹಾಕಲಾಗಿದೆ.
‘ನೆಲದ ಕಾನೂನಗಳನ್ನು ಗೌರವಿಸದ, ಪೂಜಿಸುವ ಗೋವುಗಳನ್ನು ಅಮಾನುಷವಾಗಿ ಕಡಿದು ಕೊಲ್ಲುವ, ದೇಶದ ಅಖಂಡತೆಗೆ ಸವಾಲು ಎಸೆಯುವ ಮತಾಂಧರು ಹಾಗೂ ಗೋಕಳ್ಳರ ಜತೆಗೆ ಶಿವಪುರ ಶಂಕರಲಿಂಗೇಶ್ವರ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸುವುದಿಲ್ಲ, ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ’ ಎಂಬ ಬ್ಯಾನರ್ ಅನ್ನು ಜಾತ್ರೆ ಫ್ರೆಂಡ್ಸ್ ಹೆಸರಿನಲ್ಲಿ ಹಾಕಲಾಗಿದೆ.