ದಾವಣಗೆರೆ: ನಗರದ ಎಪಿಎಂಸಿ ಯಾರ್ಡ್‌ನಲ್ಲಿ ರೈತರು ಹಾಗೂ ವರ್ತಕರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ವಂಚಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಡಿಸಿಆರ್‌ಬಿ ಪೊಲೀಸರು, ಆರು ಆರೋಪಿಗಳಿಂದ ಒಟ್ಟು ₹2.68 ಕೋಟಿ ನಗದು ವಶಪಡಿಸಿಕೊಳ್ಳುವ ಮೂಲಕ ರೈತರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ‘ದಾವಣಗೆರೆ ಎಪಿಎಂಸಿ ಯಾರ್ಡ್‌ನಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ ಮಾಲೀಕತ್ವದ ಕೆ.ಸಿ.ಟ್ರೇಡರ್ಸ್ ಹಾಗೂ ಜಿ.ಎಂ.ಸಿ ಗ್ರೂಪ್ಸ್‌ಗೆ ಮಾರಾಟ ಮಾಡಿರುವ ಮೆಕ್ಕೆಜೋಳದ ಹಣ ₹ 47,42,393 ಅನ್ನು ನೀಡದೇ ವಂಚಿಸಿದ್ದಾರೆ ಎಂದು ಆಂಜನೇಯ ಏಜೆನ್ಸಿಸ್‌ನ ಮಾಲೀಕ ಸಂತೋಷ್ ಎಂ.ಆರ್. ಅವರು ಕಳೆದ ಮಾರ್ಚ್‌ನಲ್ಲಿ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಒಟ್ಟು 96 ರೈತರು ಹಾಗೂ 29 ವರ್ತಕರಿಗೆ ಹಣ ಕೊಡಬೇಕಾಗಿದೆ ಎಂದು ಕೆ.ಸಿ. ಟ್ರೇಡರ್ಸ್ ಹಾಗೂ ಜಿ.ಎಂ.ಸಿ. ಗ್ರೂಪ್ಸ್ ವಿರುದ್ಧ ಪ್ರಕರಣ ದಾಖಲಾಗಿತ್ತು. ರೈತರಿಗೆ ಮೋಸ ಮಾಡಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಗಾಗಿ ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಿ.ಎಸ್.ಬಸವರಾಜ್ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು 96 ರೈತರಿಗೆ ವಂಚಿಸಿದ್ದ ₹ 1.51 ಕೋಟಿ ಹಾಗೂ 29 ವರ್ತಕರಿಗೆ ವಂಚಿಸಿದ್ದ ₹ 1.17 ಕೋಟಿ ಸೇರಿ ಒಟ್ಟು ₹ 2.68 ಕೋಟಿ ನಗದನ್ನು ಆರೋಪಿಗಳಿಂದ ಜಪ್ತಿ ಮಾಡಿದೆ’ ಎಂದು ತಿಳಿಸಿದರು.
‘ಆರೋಪಿಗಳಾದ ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ(38), ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯ ಚೇತನ್ (24), ದಾವಣಗೆರೆಯ ಸರಸ್ವತಿ ನಗರದ ಮಹೇಶ್ವರಯ್ಯ (35), ಹರಿಹರ ತಾಲ್ಲೂಕಿನ ಸಾಲಕಟ್ಟೆಯ ವಾಗೀಶ್ (49), ಅದೇ ಗ್ರಾಮದ ಚಂದ್ರು (40) ಹಾಗೂ ದಾವಣಗೆರೆಯ ಪಿ.ಬಿ. ರಸ್ತೆಯ ನಿವಾಸಿಯಾದ ಕೆನರಾ ಬ್ಯಾಂಕ್ ನೌಕರ ಶಿವಕುಮಾರ್ (59) ಅವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು. ಹೀಗಿದ್ದರೂ ತನಿಖಾ ತಂಡವು ಆರೋಪಿಗಳನ್ನು ವಿಚಾರಣೆ ನಡೆಸಿ, ವಂಚಿಸಿದ್ದ ಹಣವನ್ನು ಜಪ್ತಿ ಮಾಡಿದೆ. ನ್ಯಾಯಾಲಯದ ಮುಂದೆ ಹಣವನ್ನು ಹಾಜರುಪಡಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಲಾಗುವುದು’ ಎಂದು ತಿಳಿಸಿದರು.
‘ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕಿನ ರೈತರಿಂದ ಖರೀದಿಸಿದ್ದ ಮೆಕ್ಕೆಜೋಳಕ್ಕೆ ಹಣವನ್ನು ನೀಡದೇ ವಂಚಿಸಲಾಗಿತ್ತು. ವಂಚನೆಗೊಳಗಾದ ರೈತರು ಹಣ ಕೊಡಿಸುವಂತೆ ಶಾಸಕರು, ಸಂಸದರಿಗೂ ಮನವಿ ಮಾಡಿದ್ದರು. ರೈತರಿಗೆ ಮೋಸ ಮಾಡಿದ್ದ ಶೇ 100ರಷ್ಟು ಹಣವನ್ನೂ ಜಪ್ತಿಮಾಡಿದ್ದೇವೆ. ತನಿಖಾ ತಂಡಕ್ಕೆ ಒಳ್ಳೆಯ ನಗದು ಬಹುಮಾನ ಹಾಗೂ ಪ್ರಶಂಸಾಪತ್ರ ನೀಡಲಾಗುವುದು’ ಎಂದು ಶ್ಲಾಘಿಸಿದರು.
‘ಆರೋಪಿಗಳು ಸಂಬಂಧಿಕರು ಹಾಗೂ ಸ್ನೇಹಿತರಾಗಿದ್ದಾರೆ. ಜೀವವಿಮೆ ಪರಿಹಾರ ಕೊಡಿಸುತ್ತೇವೆ ಎಂದು ನಂಬಿಸಿ ರೈತರ ದಾಖಲೆಗಳನ್ನು ಪಡೆದು ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ವಂಚಿಸಿರುವ ಬಗ್ಗೆ ಮಹೇಶ್ವರಯ್ಯ, ಚಂದ್ರು, ವಾಗೀಶ್ ಹಾಗೂ ಶಿವಕುಮಾರ್ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಣ ಕೇಳಲು ಬಂದ ರೈತರಿಗೆ ಬೆದರಿಕೆ ಹಾಕಲು ವಿಷ ಸೇವನೆ ಮಾಡಿರುವ ಬಗ್ಗೆಯೂ ಮಹೇಶ್ವರಯ್ಯ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆನರಾ ಬ್ಯಾಂಕಿನ ನೌಕರರ ಶಿವಕುಮಾರ್ ನೆರವಿನಿಂದ ಬ್ಯಾಂಕಿನಲ್ಲಿ ನಕಲಿ ಖಾತೆ ತೆರೆದು, ಮೆಕ್ಕೆಜೋಳ ಕಂಪನಿಯಿಂದ ಹಣವನ್ನು ಆ ಖಾತೆಗೆ ಹಾಕಿಸಿಕೊಂಡು ಬಳಿಕ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು’ ಎಂದು ವಿವರ ನೀಡಿದರು.
ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಬಿ.ಎಸ್. ಬಸವರಾಜ್, ಎಎಸ್‌ಐ ಎಂ. ಆಂಜನಪ್ಪ, ಸಿಬ್ಬಂದಿಗಳಾದ ಕೆ.ಸಿ. ಮಜೀದ್, ಕೆ.ಟಿ. ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಎಚ್.ಆರ್. ನಟರಾಜ್, ಈ.ಬಿ.ಅಶೋಕ, ಆರ್. ರಮೇಶ ನಾಯ್ಕ, ಸಿ.ಎಸ್. ಬಾಲರಾಜ್, ಸಿ.ಮಲ್ಲಿಕಾರ್ಜುನ್, ಬಸವರಾಜ್, ಮೊಮ್ಮಮದ್ ರಫಿ, ಮಾಲತೇಶ್ ಹಾಗೂ ನಿಂಗರಾಜ್ ಪಾಲ್ಗೊಂಡಿದ್ದರು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಎಂ. ಹಾಗೂ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.