Saturday, December 14, 2024
Homeಮೈಸೂರು ವಿಭಾಗಮೈಸೂರುಮೈಸೂರಿನಲ್ಲಿ ಕಾರ್ಮಿಕರ ಪ್ರತಿಭಟನೆ

ಮೈಸೂರಿನಲ್ಲಿ ಕಾರ್ಮಿಕರ ಪ್ರತಿಭಟನೆ

ಮೈಸೂರು: ಕಟ್ಟಡ ಕಾರ್ಮಿಕರು ಹಾಗೂ ಬಿಸಿಯೂಟ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಕಾರ್ಮಿಕ ಇಲಾಖೆ ಮುಂದೆ ಗುರುವಾರ ‍ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು.

ಅರ್ಜಿ ಸಲ್ಲಿಸಿದ ಎಲ್ಲರಿಗೂ ₹ 3 ಸಾವಿರ ಕೋವಿಡ್ ಪರಿಹಾರ ನೀಡಬೇಕು, ವೈದ್ಯಕೀಯ ಸಹಾಯಧನ, ಸಹಜ ಮರಣ ಪರಿಹಾರ ಭತ್ಯೆಯನ್ನು ಹೆಚ್ಚಿಸಬೇಕು, ಅಪಘಾತ ಮರಣ ಪರಿಹಾರ ಭತ್ಯೆಯನ್ನು ₹ 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ವಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಬಸವಯ್ಯ, ಪದಾಧಿಕಾರಿಗಳಾದ ನಾಗೇಶ್, ಮಂಜುನಾಥ್, ಕುಮಾರ್ ಇದ್ದರು.

ಬಿಸಿಯೂಟ ತಯಾರಿಕರ ಪ್ರತಿಭಟನೆ

ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಕಾರ್ಮಿಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಮುಖ್ಯ ಬಿಸಿಯೂಟ ತಯಾರಕರಿಗೆ ₹ 2,700 ಹಾಗೂ ಅಡುಗೆ ಸಹಾಯಕರಿಗೆ ₹ 2,600 ಮಾತ್ರವೇ ಲಭ್ಯವಾಗುತ್ತಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಇಷ್ಟು ಹಣದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹಾಗಾಗಿ, ವೇತನ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರ್ಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಕನಿಷ್ಠ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿಯ ಕಾರ್ಯದರ್ಶಿ ಕೆ.ಜಿ.ಸೋಮರಾಜೇ ಅರಸ್, ಮುಖಂಡರಾದ ಪದ್ಮಮ್ಮ, ಸಾವಿತ್ರಮ್ಮ ಇದ್ದರು.