Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಮೊಟ್ಟೆ ವಿತರಣೆ ನಿಲ್ಲದು, ತಿನ್ನದವರಿಗೆ ಹಾಲು ಕೊಡುತ್ತೇವೆ: ಹಾಲಪ್ಪ

ಮೊಟ್ಟೆ ವಿತರಣೆ ನಿಲ್ಲದು, ತಿನ್ನದವರಿಗೆ ಹಾಲು ಕೊಡುತ್ತೇವೆ: ಹಾಲಪ್ಪ

ಬೆಳಗಾವಿ: ‘ಪೋಷಕಾಂಶಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ. ಅದನ್ನು ತಿನ್ನದವರಿಗೆ ಹಾಲು ಕೊಡಲಾಗುತ್ತಿದೆ. ಮೊಟ್ಟೆ ವಿತರಣೆ ನಿಲ್ಲುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಕೆಲವರಿಂದ ವಿರೋಧ ವ್ಯಕ್ತವಾಗಿರುವ ಕುರಿತು ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ತಜ್ಞರ ಶಿಫಾರಸಿನಂತೆ ಮೊಟ್ಟೆ ವಿತರಿಸಲಾಗುತ್ತಿದೆ’ ಎಂದರು.

ಓಮೈಕ್ರಾನ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ‘ತಜ್ಞರ ಸಲಹೆ ಮೇರೆಗೆ ಸದ್ಯ 2 ಗಂಟೆಯಷ್ಟೆ ಆ ಕೇಂದ್ರಗಳನ್ನು ನಡೆಸುತ್ತಿದ್ದೇವೆ. ಮುಂದೆ ಈ ಅವಧಿ ಹೆಚ್ಚಿಸುತ್ತೇವೆ. ಓಮೈಕ್ರಾನ್‌ ವಿಷಯದಲ್ಲಿ ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ನಮ್ಮ ಸರ್ಕಾರ ಬಂದಾಗ ವಾಪಸ್ ತೆಗೆದುಕೊಳ್ಳುತ್ತೇವೆ’ ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ, ‘ಅವರ ಸರ್ಕಾರ ಬಂದಾಗ ಮಾಡಿಕೊಳ್ಳಲಿ. ಈಗ ನಮ್ಮ ಸರ್ಕಾರದಲ್ಲಿ ಏನು ನ್ಯಾಯ ಕೊಡಬೇಕೋ ಕೊಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.