ದಾವಣಗೆರೆ: ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಪಿಕ್‌ಅಪ್ ಜಲಾಶಯಲ್ಲಿ ಗುರುವಾರ ಮೊಸಳೆ ಕಾಣಿಸಿಕೊಂಡಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಕ್ಲೀಪುರ ಗ್ರಾಮದ ಹೊರವಲಯ ಪಿಕಪ್ ಅಣೆಕಟ್ಟೆಯ ಹಳ್ಳದ ಸಂಗಮ ಸ್ಥಳದಲ್ಲಿ ಸ್ವಚ್ಛಂದವಾಗಿ ಈಜುತ್ತಿರುವ ಮೊಸಳೆಯ ಚಿತ್ರ ಸೆರೆಹಿಡಿದಿರುವ ಗ್ರಾಮಸ್ಥರು ಸಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಜಾಗೃತಿ ಮೂಡಿಸಿದರು.
ಈಚೆಗೆ ಸುರಿದ ಹೆಚ್ಚಿನ ಪ್ರಮಾಣದ ಮಳೆಗೆ ಭಾರಿ ಗಾತ್ರದ ಮೊಸಳೆ ಸೂಳೆಕೆರೆಯಿಂದ ಈಜಿಕೊಂಡು ಬಂದಿರಬಹುದು. ಆಹಾರಕ್ಕೆ ದೊಡ್ಡ ಮೀನುಗಳು ಸಿಗುತ್ತಿರಬಹುದು ಎಂದು ರೈತರು ತಿಳಿಸಿದ್ದಾರೆ.
‘ಸಂಕ್ಲೀಪುರ, ಮಲ್ಲನಾಯಕನಹಳ್ಳಿ, ಗುಳದಳ್ಳಿ ಭಾಗದಲ್ಲಿ ಜನತೆ ಹಳ್ಳದ ನೀರಿನಲ್ಲಿ ಇಳಿಯಬೇಡಿ. ಕೆರೆಯಲ್ಲಿ ಮೀನು ಹಿಡಿಯಲು ಹೋಗುವವರು ಎಚ್ಚರದಿಂದಿರಿ’ ಎಂಬ ಸಂದೇಶ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿವೆ.
ತಾಲ್ಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಮೊಸಳೆ ಸೆರೆ ಹಿಡಿದು ಬೇರೆಡೆ ಸಾಗಿಸಬೇಕು ಎಂದು ಗ್ರಾಮಸ್ಥರು, ಮೀನುಗಾರರು ಮನವಿ ಮಾಡಿದ್ದಾರೆ.
ಮೂರು ವರ್ಷಗಳ ಹಿಂದೆ ಪಿಕ್‌ಅಪ್ ಜಲಾಶಯದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಕೆಲ ವರ್ಷಗಳ ಹಿಂದ ಜಲಾಶಯದ ಕೆಳಭಾಗದಲ್ಲಿ ಮೊಸಳೆಯನ್ನು ಸೆರೆ ಹಿಡಿದಿದ್ದರು ಎಂದು ಜನತೆ ಮಾಹಿತಿ ನೀಡಿದರು.