Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಯಡ್ರಾಮಿ: ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ಅಹೋರಾತ್ರಿ ರೈತರ ಧರಣಿ

ಯಡ್ರಾಮಿ: ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ಅಹೋರಾತ್ರಿ ರೈತರ ಧರಣಿ

ಯಡ್ರಾಮಿ (ಕಲಬುರಗಿ ಜಿಲ್ಲೆ): ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ರೈತರು ಪಟ್ಟಣದ ತಹಶೀಲ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. ಕೊರೆಯುವ ಚಳಿಯಲ್ಲಿ ಅಲ್ಲೇ ಮಲಗಿದ್ದರು.

ಸಂಘಟನೆಗಳ ಮುಖಂಡರು ಮತ್ತು ರೈತರು ಮಂಗಳವಾರ ಮುಂಜಾನೆಯಿಂದ ತಹಶೀಲ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ಸಂಜೆಯಾದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ ಪ್ರತಿಭಟನೆ ಮುಂದುವರಿಸಿದರು. ಕರವೇ ಅಧ್ಯಕ್ಷ ವಿಶ್ವನಾಥ ಜಿ ಪಾಟೀಲ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಈರಣ್ಣ ಭಜಂತ್ರಿ ಉಪವಾಸ ಇರುವುದರಿಂದ ಮತ್ತು ಬಿಸಿಲಿನಿಂದ ಅಸ್ವಸ್ಥಗೊಂಡು ರಾತ್ರಿ ಆಸ್ಪತ್ರೆಗೆ ದಾಖಲಾದರು.

ಅಧಿಕಾರಿಗಳು ಸಹ ಆಸ್ಪತ್ರೆ ಕಡೆ ಮುಖ ಮಾಡಲಿಲ್ಲ. ಅಹೋರಾತ್ರಿ ಧರಣಿ ಕೈಗೊಂಡರೂ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಒಕ್ಕೂಟದ ಅಧ್ಯಕ್ಷ ಅಮರನಾಥ ಸಾಹು, ಕರವೇ ಅಧ್ಯಕ್ಷ ವಿಶ್ವನಾಥ ಪಾಟೀಲ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಚಂದ್ರು ಮಲ್ಲಾಬಾದ್, ಕರವೇ ಮುಖಂಡ ಅಫ್ರೋಜ್ ಅತ್ನೂರ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಮತ್ತು ರೈತರು ಚಳಿಯಲ್ಲಿ ಧರಣಿ ಮುಂದುವರೆಸಿದರು.

ಬುಧವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಬಂದ ಮೇಲೆ ತಹಶೀಲ್ ಕಚೇರಿ ಬೀಗ ಹಾಕಲಾಗುವುದು. ರೈತರಿಗೆ ಆದ ಅನ್ಯಾಯವನ್ನು ಅಧಿಕಾರಿಗಳು ಸರಿ ಪಡಿಸಿ ಪರಿಹಾರ ನೀಡುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಮುಖಂಡರು, ರೈತರು ತಿಳಿಸಿದರು.