ಯಲ್ಲಾಪುರ: ಉದ್ಯಮಿಯ ಮನೆಗೆ ಹೋಗಿ ಹಲ್ಲೆ ನಡೆಸಿದ್ದಲ್ಲದೇ ಅವರ ಹತ್ಯೆಗೆ ಸಂಚು ಹೂಡಿದ ಆರೋಪದ ಮೇಲೆ ಎಂಟು ಮಂದಿ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಪಟ್ಟಣದ ಸಬಗೇರಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ ರೇವಣಕರ್ ಎಂಬುವವರ ಮನೆಗೆ ಶುಕ್ರವಾರ ರಾತ್ರಿ ಕೆಲವು ಅಪರಿಚಿತರು ಬಂದು ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಕಿತ್ತುಕೊಂಡು ಹೋದ ಬಗ್ಗೆ ಸುರೇಶ ಅವರು ಯಲ್ಲಾಪುರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಭಾನುವಾರ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ನಂದೊಳ್ಳಿಯ ಮಹಾಬಲೇಶ್ವರ ಗಣಪತಿ ಭಟ್ಟ ( ಎಂ.ಜಿ.ಭಟ್ಟ), ಹಳಿಯಾಳ ಕಸಬಾ ಗಲ್ಲಿಯ ವಿನೋದ ರಾಮಚಂದ್ರ ಕಾಮತ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನ್ಯೂ ನಾಯ್ಕನಗಲ್ಲಿಯ ಗೋವಿಂದ ಶಾಂತಾರಾಮ ಸುತಾರ, ಖಾನಾಪುರ ಯಡೋಗಾದ ನಾಮದೇವ ಶಿವಾಜಿ ಹಲಗೇಕರ್, ಬೆಳಗಾವಿ ಜಿಲ್ಲೆಯ ವಡಗಾಂವಿನ ವಡ್ಡರ ಕಾಲೊನಿ ತಗ್ಗಿನಗಲ್ಲಿಯ ಸುಶಾಂತ ಅಶೋಕ ಖಾನಾಪುರಿ, ಶ್ರೀಧರ ಸುರೇಶ ಉಪ್ಪರಿ, ರಾಘವೇಂದ್ರ/ ರಾಘು ಅಶೋಕ ಸಿಣ್ಣೂರು, ಮಂಜುನಾಥ ಗಂಗಾರಾಮ ದಂಡಗಲ್ ಬಂಧಿತರು. ಆರೋಪಿಗಳಿಂದ ಎರಡು ಬೈಕ್‌ಗಳು, ಒಂದು ಕಾರು,9 ಒಂಬತ್ತು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಹಾಗೂ ಹೆಚ್ಚುವರಿ ಎಸ್.ಪಿ. ಎಸ್.ಬದರಿನಾಥ ಮಾರ್ಗದರ್ಶನದಲ್ಲಿ ಶಿರಸಿ ಡಿ.ಎಸ್.ಪಿ ರವಿ ನಾಯ್ಕ ನೇತೃತ್ವದಲ್ಲಿ ಯಲ್ಲಾಪುರ ಪಿ.ಐ, ಪಿ.ಎಸ್.ಐ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.