ಅಂದು ಮಾರ್ಚ್ 15, 2019, ಶುಕ್ರವಾರ. ಕ್ರೈಸ್ಟ್ ಚರ್ಚ್ ನಗರದ ನೂರ್ ಮಸೀದಿ, ಮಧ್ಯಾಹ್ನದ ಪ್ರಾರ್ಥನೆ ನೆಡೆದಿತ್ತು. ಅಲ್ಲಿಗೆ ನುಗ್ಗಿದ ಬಿಳಿಯ ಮೇಲಿರಿಮೆ ಇರುವ ಘಾತುಕನೊಬ್ಬ ಏಕಾಏಕಿ ತನ್ನ ಆಟೋಮ್ಯಾಟಿಕ್ A-15 ಬಂದೂಕಿನಿಂದ ಗುಂಡು ಹಾರಿಸಲು ಶುರುಮಾಡಿದ್ದ ಅಲ್ಲಿ ಮಾರಣ ಹೋಮ ಮುಗಿಸಿ ಸ್ವಲ್ಪ ದೂರದಲ್ಲಿದ್ದ ಲಿನ್ ವುಡ್ ಇಸ್ಲಾಮಿಕ್ ಸೆಂಟರ್ಗೆ ತೆರಳಿ ಅಲ್ಲಿ ಕೂಡ ಅದೇ ಘೋರ ಕೃತ್ಯ ಎಸೆಗಿದ್ದ. ಅಂದು ಸತ್ತವರ ಸಂಖ್ಯೆ 51 ಮತ್ತು ತೀವ್ರವಾಗಿ ಗಾಯಗೊಂಡವರ ಸಂಖ್ಯೆ 40. ಸತ್ತವರಲ್ಲಿ ಪುಟ್ಟ ಮಕ್ಕಳಿದ್ದರು. ಸತ್ತವರಿಗೆ ತಾವು ಏಕೆ ಸತ್ತೆವು ಎಂದು ಕೂಡ ತಿಳಿಯಲಿಲ್ಲ. ಎಲ್ಲಿಂದಲೋ ನುಗ್ಗಿ ಬಂದ ಗುಂಡು ಅವರ ದೇಹ ತೂರಿ ಕ್ಷಣಾರ್ಧದಲ್ಲಿ ಪ್ರಾಣ ಹಾರಿಸಿತ್ತು. ಕ್ರೈಸ್ಟ್ ಚರ್ಚ್ ಇರುವುದು ನ್ಯೂಜಿಲ್ಯಾಂಡ್ ನಲ್ಲಿ. ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರಗಳಲ್ಲಿ ನ್ಯೂಜಿಲ್ಯಾಂಡಿಗೆ ದ್ವಿತೀಯ ಸ್ಥಾನ. ಎಲ್ಲ ಧರ್ಮದವರು, ವರ್ಣದವರು ಶಾಂತಿಯುತವಾಗಿ ಬಾಳಿದ ನಾಡದು. ಹಾಗಾಗಿ ಇಡೀ ರಾಷ್ಟ್ರವೇ ಬೆಚ್ಚಿ ಬಿದ್ದಿತ್ತು. ಅಂದು ಆ ದೇಶದ ಪ್ರಧಾನಿ ನೆಡೆದುಕೊಂಡ ರೀತಿ ಅನುಕರಣೀಯ. ಈ ರೀತಿಯ ದುರ್ಘಟನೆ ನೆಡೆದಾಗ ದೇಶದ ನಾಯಕರು ಒಂದು ಸ್ಕ್ರಿಪ್ಟೆಡ್ ಭಾಷಣ ಕೊಡುವುದು ಸರ್ವೇಸಾಮಾನ್ಯ.
ಇದು ನಮ್ಮ ರಾಷ್ಟ್ರದ ವಿರುದ್ಧ ಸಾರಿದ ಸಮರ,
ಇದೊಂದು ಹೇಡಿಗಳ ಕೃತ್ಯ,
ನಾವು ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ
ದಿಟ್ಟ ಉತ್ತರ ನೀಡುತ್ತೇವೆ
ತಕ್ಕ ಪಾಠ ಕಲಿಸುತ್ತೇವೆ
ಎಲ್ಲಕ್ಕಿಂತ ಮಿಗಿಲಾಗಿ ನಾವು/ಅವರು ಎಂಬ ಬೈನರಿ ಸೃಷ್ಟಿಸಿಬಿಡುವುದು ಕೂಡ ನಾಯಕರ ನಿರೀಕ್ಷಿತ ಪ್ರತಿಕ್ರಿಯೆ.
ಆದರೆ ಅಂದು ನ್ಯೂಲಾಂಡಿನಲ್ಲಿ ನಾಯಕನ ಬದಲಾಗಿ ಪ್ರಧಾನಿಯಾಗಿದ್ದುದು ಧೀಮಂತ ನಾಯಕಿ ಜೆಸಿಂದಾ ಆರ್ಡರ್ನ ಹಿಜಾಬ್ ತೊಟ್ಟು ಮಸೀದಿಗೆ ಹೋದಳು, ನೊಂದವರ ತಬ್ಬಿ ಅತ್ತಳು, ಸತ್ತವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದಳು, ಕೊಲೆಗಾರನಿಗೆ ಬಿಟ್ಟಿ ಪ್ರಚಾರ ನೀಡುವ ಬದಲು ಪ್ರಾಣ ಕಳೆದುಕೊಂಡವರ ಗುಣಗಾನ ಮಾಡಿದಳು.
ಹೇಯ ಕೃತ್ಯದಿಂದ ಪ್ರಚಾರಗಿಟ್ಟಿಸಬಹುದು, ತಾನು ನಂಬಿದ ಸಿದ್ಧಾಂತವನ್ನ ಪಸರಿಸಬಹುದು ಎಂಬ ಭಯೋತ್ಪಾದಕನ ಉಪಾಯವನ್ನ ಬುಡಮೇಲು ಮಾಡಿದ್ದಳು ಪ್ರಧಾನಿ ಜೆಸಿಂದಾ! ಅಂದು ಜೆಸಿಂದಾ ಪ್ರಭುದ್ಧತೆ, ಮಾನವೀಯ ಸ್ಪರ್ಶ ಘಾಸಿಗೊಂಡ ಜನರಿಗೆ ಶಮನ ನೀಡಿತ್ತು. ಹಂತಕ ಸೆರೆಸಿಕ್ಕು ಹೆಸರಿಲ್ಲದವನಾದ… ಮೀಡಿಯಾ ಕೂಡ ಅವನ ಹೆಸರನ್ನು ಪ್ರಸ್ತಾಪಿಸದೆ ಪ್ರಾಣ ಕಳೆದುಕೊಂಡವರ ಕತೆಯನ್ನ ಬಿತ್ತರಿಸಿದವು. ಜೆಸಿಂದಾ ಮುಂದುವರೆದು ಕಂಪನಿಗಳ ಒತ್ತಡ ಮತ್ತು ಲಾಬಿಯನ್ನ ಬದಿಗೊತ್ತಿ ಶಸ್ತ್ರಾಸ್ತ ಖರೀದಿಗಳ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನ ಜಾರಿಗೆ ತಂದಳು. (ಅಮೇರಿಕಾದ ಶಾಲೆಗಳಲ್ಲೇ ಪ್ರತಿವರ್ಷ ಹತ್ತಾರು ಶೂಟಿಂಗ್ ಘಟನೆಗಳು ನಡೆದು ಪುಟ್ಟ ಪುಟ್ಟ ಮಕ್ಕಳು ಜೀವ ಕಳೆದುಕೊಂಡರೂ ಶಸ್ತ್ರಾಸ್ತ ಖರೀದಿಯ ನಿಯಂತ್ರಣಕ್ಕೆ ಕಠಿಣ ಕಾನೂನುಗಳು ಜಾರಿಗೊಳಿಸಲು ಆಗಿಲ್ಲ ಎಂಬುದನ್ನ ಗಮನಿಸಬೇಕು) ನ್ಯೂಜಿಲ್ಯಾಂಡ್ನಲ್ಲಿಂದೂ ಜನರ ಮನಸಲ್ಲಿ ಹಗೆ ಬಿತ್ತುವ ಭಾಷಣಗಳು ಕಾನೂನುಬಾಹಿರ. She brought new legislation to curb hate speech.
ದುರ್ಬಲ ಅಲ್ಪಸಂಖ್ಯಾತರ ಕುರಿತು ಸೂಕ್ಷ್ಮತೆ, ಸಹಾನುಭೂತಿ, ಕಾಳಜಿಗಳ ಆಧಾರದ ಮೇಲೆ ಅಧಿಕಾರ ನೆಡೆಸಿದ ಜೆಸಿಂದಾ ಸ್ತ್ರೀದ್ವೇಷಿಗಳ ಕೆಂಗಣ್ಣಿಗೆ ಗುರಿಯಾದದ್ದು ಇದೆ. ಹಾಗೆಂದು ಅವಳು ತನ್ನ ಇಪ್ಪತ್ತನೇ ವಯಸ್ಸಿನಿಂದ ನೆಡೆಸಿದ LGBT ಹಕ್ಕುಗಳಿಗಾಗಿ ಹೋರಾಟದಿಂದ ವಿಮುಖಳಾಗಲಿಲ್ಲ. ಪ್ರಧಾನಿಯಾಗಿದ್ದಾಗಲೇ ತಾನು ಗರ್ಭವತಿಯೆಂದು ಘೋಷಿಸಿದಳು, ಮಗುವಿನ ಜನನದ ನಂತರ ಉಪಪ್ರಧಾನಿಗೆ ಅಧಿಕಾರ ವಹಿಸಿ ಆರು ವಾರಗಳ ಕಾಲ ಮಾತೃತ್ವ ರಜೆ ಪಡೆದು ಶಿಶು ಆರೈಕೆ ಮಾಡಿದಳು. ತನ್ನ ಪ್ರಿಯಕರ ಮುಂದಿನ ದಿನಗಳಲ್ಲಿ ಮನೆಯಲ್ಲಿದ್ದುಕೊಂಡು ಶಿಶು ಪಾಲನೆ ಮಾಡುವನು ಎಂದು ಹೇಳಿಕೆ ನೀಡಿದಳು. ಸಮಾಜದ Gender Stereotypeಗಳನ್ನ ಒಡೆಯುವ ಬಗೆ ಇದು.
ಪ್ರಧಾನಿಯಾಗಿ ಜೆಸಿಂದಾ ಎದುರಿಸಿದ ಅತಿದೊಡ್ಡ ಸವಾಲು ಕರೋನ ಮಹಾಮಾರಿ. ಕರೋನದ ಒಂದು ಕೇಸ್ ಪತ್ತೆಯಾಗುವ ಮೊದಲೇ ತನ್ನ ದೇಶದ ಗಡಿಯನ್ನ ತ್ವರಿತ ಗತಿಯಲ್ಲಿ ಮುಚ್ಚಿಸಿದಳು. ಪ್ರತಿದಿನ ಫೇಸ್ಬುಕ್ ಲೈವ್ ಬಂದು ಜನರಿಗೆ ಅತ್ಯತ್ತಮ ಮಾಹಿತಿ ನೀಡಿ, ಧೈರ್ಯ ತುಂಬಿದಳು. ಡೊನಾಲ್ಡ್ ಟ್ರಂಪ್ ನಾಯಕತ್ವದ ಅಮೇರಿಕಾದಲ್ಲಿ ಜನ ಕರೋನ ಮಹಾಮಾರಿಗೆ ಬಲಿಯಾಗಿ ಬೀದಿ ಹೆಣವಾಗುತ್ತಿದ್ದ ಕಾಲದಲ್ಲಿ, ಕಟ್ಟುನಿಟ್ಟಾದ ದಿಗ್ಬಂಧನದ (ಕ್ವಾರೆಂಟೈನ್) ನೀತಿಗಳನ್ನ ಜಾರಿಗೆ ತಂದು ಪ್ರಾಣ ಹಾನಿ ತಡೆದಳು ಜೆಸಿಂದಾ. [ರಾಜಾರಾಮ್ ತಲ್ಲೂರ್ ಅವರ ಮಾತುಗಳನ್ನ ಇಲ್ಲಿ ಉಲ್ಲೇಖ ಮಾಡುವುದು ಸೂಕ್ತ “ಕೋವಿಡ್ ಕಾಲದಲ್ಲಿ ನ್ಯೂಜಿಲೆಂಡ್ ಕೂಡ ಬೇರೆ ದೇಶಗಳಂತೆಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಪ್ರಧಾನಿಯಾಗಿ ತನ್ನ ಸಂಬಳದಲ್ಲೂ 20% ಕಡಿತ ಮಾಡಿಕೊಳ್ಳುವ ಮೂಲಕ, ತಾನು ದೇಶದ ಜನರೊಂದಿಗಿದ್ದೇನೆ ಎಂಬ ಭಾವನಾತ್ಮಕ ತಂತುವನ್ನು ಮೀಟಿದ ನ್ಯೂಜಿಲೆಂಡಿನ ಪ್ರಧಾನಿ ಜೆಸಿಂದಾ ಅರ್ಡೆನ್, 21ನೇ ಶತಮಾನದ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಬರೆದ ರಾಜಕಾರಣಿ ಆಗಿ ಚರಿತ್ರೆಯಲ್ಲಿ ದಾಖಲಾಗುತ್ತಾರೆ.”]
ಇದರ ಜೊತೆಗೆ ಕೃಷಿ ವಲಯ ಹೊರಸೂಸುವ ತ್ಯಾಜ್ಯಗಳಿಗೆ ಕ್ಲೈಮೇಟ್ ತೆರಿಗೆ, ಮೂಲಭೂತ ನಿವಾಸಿಗಳ ಸಬಲೀಕರಣ, ದ್ವೇಷ ರಾಜಕಾರಣ ಮತ್ತು ಧರ್ಮದ ಹೆಸರಲ್ಲಿ ನೆಡೆದಿದ್ದ ದೃವೀಕರಣಕ್ಕೆ ತಡೆ, ಇಸ್ಲಾಮೊಫೋಬಿಯ ದೇಶದಿಂದ ಹೊರದಬ್ಬಿದ ಶ್ರೇಯಸ್ಸು ಈಕೆಗೆ ಸಲ್ಲಬೇಕು.
ಪೊಲೀಸ್ ಅಧಿಕಾರಿ ಮತ್ತು ಸ್ಕೂಲ್ ಕೆಫೆಟೇರಿಯಾ ಕೆಲಸಗಾರ್ತಿಯ ಮಗಳಾಗಿ ಹುಟ್ಟಿದ ಜೆಸಿಂದಾ, ತನ್ನ 17ನೇ ವಯಸ್ಸಿಗೆ ಲೇಬರ್ ಪಾರ್ಟಿ ಸೇರಿ ರಾಜಕೀಯಕ್ಕೆ ಕಾಲಿಟ್ಟಳು, ಮೊದಲಿನಿಂದಲೂ ಪ್ರಧಾನಿ ಪಟ್ಟಕ್ಕೆ ಹೇಳಿಮಾಡಿಸಿದಾಕೆ. ಮಾಜಿ ಪ್ರಧಾನಿ ಹೆಲೆನ್ ಕ್ಲಾರ್ಕ್ ಕಾಲದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಆಕೆಯದು. ಮುಂದುವರೆದು ಟೋನಿ ಬ್ಲೇರ್ ಸಂಪುಟದಲ್ಲಿ ಕೆಲಸ ಮಾಡಿದರೂ, “2003 ರಲ್ಲಿ ಅಮೇರಿಕಾದ ಜೊತೆಗೆ ಕೈ ಜೋಡಿಸಿ ಇರಾಕ್ ಮೇಲೆ ಅನೈತಿಕ ದಾಳಿ ಮಾಡಿದ್ದೇಕೆ” ಎಂದು ಟೋನಿ ಬ್ಲೇರ್ ಅವರನ್ನೇ ಪ್ರಶ್ನಿಸಿ ಸಂಕಷ್ಟಕ್ಕೆ ಸಿಲುಕಿಸಿದ್ದಳು ಜೆಸಿಂದಾ .
2008 ರಲ್ಲೇ ಸಂಸದೆಯಾಗಿದ್ದ ಜೆಸಿಂದಾ, 2017 ಹೊತ್ತಿಗೆ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದಳು. ಅವಳ ವರ್ಚಸ್ಸು, ಜನಪ್ರಿಯತೆಯಿಂದ ನ್ಯೂಜಿಲ್ಯಾಂಡ್ “ಜೆಸಿಂದಾಮೇನಿಯಾಗೆ” ಸಿಲುಕಿತು. 37ರ ಅತ್ಯಂತ ಸಣ್ಣ ವಯಸ್ಸಿಗೆ ಜೆಸಿಂದಾ ಪ್ರಧಾನಿಯಾದಳು. “ನನ್ನ ದೇಶ ಚಿಕ್ಕದು, ನಮ್ಮ ಪ್ರಭಾವ ಚಿಕ್ಕದು ಆದರೆ ವಿಶ್ವ ಮಟ್ಟದಲ್ಲಿ ನಾವು ನೈತಿಕ ನಾಯಕತ್ವ ಕೊಡಲು ಶಕ್ತರು.” ಎಂದು ಘೋಷಿಸಿದಳು. ನುಡಿದಂತೆ ನೆಡೆದಳು. Ms. Jacinda Ardern stands out among world leaders for walking the talk.
ಇದೇ ಜನವರಿ 19 ರಂದು ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ಘೋಷಿಸಿ ವಿಶ್ವವನ್ನೇ ಅಚ್ಚರಿಗೊಳಿಸಿದ್ದಾಳೆ. ಭಾವುಕರಾದರು ತಮ್ಮ ಕಣ್ಣೀರು ತಡೆ ಹಿಡಿದು ಮಾತನಾಡುತ್ತಾ ಫೆಬ್ರವರಿ 7 ಪ್ರಧಾನಿ ಕಚೇರಿಯಿಂದ ಕೊನೆಯ ಬಾರಿಗೆ ಹೊರನೆಡೆದು ವಿದಾಯ ಹೇಳಲಿದ್ದೇನೆ” ಎಂದಳು. ಜೆಸಿಂದಾ. “ಪ್ರಧಾನಿ ಪಟ್ಟವೆಂಬುದು ಅತ್ಯಂತ ಜವಾಬ್ಧಾರಿಯುತ ಪಟ್ಟ. ಈ ಜವಾಬ್ದಾರಿಯನ್ನ ಹೊತ್ತು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಕುರಿತು ಸತತವಾಗಿ ಪ್ರಶ್ನಿಸಿಕೊಳ್ಳುವ ಜವಾಬ್ದಾರಿಯು ನನ್ನ ಮೇಲಿದೆ. ಈ ಪಟ್ಟ ಏನನ್ನ ಬೇಡುತ್ತದೆ ಅನ್ನುವುದು ನನಗೆ ತಿಳಿದಿದೆ ಹಾಗು ಈ ಪಟ್ಟಕ್ಕೀಗ ನ್ಯಾಯ ಒದಗಿಸುವ ಉತ್ಸಾಹ, ಸತ್ವ ನನ್ನಲ್ಲಿ ಉಳಿದಿಲ್ಲವೆಂದು” ಹೇಳಿಕೆ ನೀಡಿ ತನ್ನ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾಳೆ.
ಕರೋನ ಮಹಾಮಾರಿಯ ನಂತರದ ದಿನಗಳಲ್ಲಿ ತಲೆದೂರಿರುವ ಬಿಕ್ಕಟ್ಟು, ಹಣದುಬ್ಬರ, ಪ್ರಗತಿಪರ ನೀತಿಗಳ ವಿರುದ್ಧ ಭುಗಿಲೆದ್ದ ಅಸಮಾಧಾನ ಈ ಧಿಡೀರ್ ನಿಧಾರಕ್ಕೆ ಕಾರಣವೆಂದು ಕೆಲವರು ಅಭಿಪ್ರಾಯಪಟ್ಟರೆ, ” ಇನ್ ಮೇಲೆ ಕುಟುಂಬದ ಕಡೆಗೆ ಗಮನ ಹರಿಸುವೆ, ಮಗಳಿಗೀಗ ನಾಲ್ಕು ವರ್ಷ, ಶಾಲೆಗೋಗುವ ದಿನಗಳು ಸನಿಹದಲ್ಲಿವೆ” ಎಂಬ ಹೇಳಿಕೆ ರಾಜೀನಾಮೆ ಎಪಿಸೋಡಿಗೆ ಇನ್ನೊಂದು ಆಯಾಮ ನೀಡಿದೆ. ಬಹುಷಃ ಇಷ್ಟು ದಿನಗಳ ನಂತರ ಪ್ರಿಯಕರನನ್ನ ಮದುವೆಯಾಗುವ ಆಸೆ ಜೆಸಿಂದಾಳಲ್ಲಿ ಮೂಡಿರಬೇಕು, ತನ್ನ ಪುಟ್ಟ ಹೆಗಲ ಮೇಲಿದ್ದ ದೇಶದ ಜವಾಬ್ದಾರಿ ಹೊರೆಯನ್ನ ಕೆಳಗಿಳಿಸಿ ಸಾಮಾನ್ಯ ಗೃಹಿಣಿಯಂತೆ ಬದುಕುವ ಕನಸು ಚಿಗುರೊಡೆದಿರಬೇಕು.
ಸ್ವಾರ್ಥಕ್ಕಾಗಿ ರಾಜಕೀಯ ನೆಡೆಸುವ ಈ ಕಾಲದಲ್ಲಿ, ದ್ವೇಷದ ಮಾತುಗಳನ್ನೇ ಬಂಡವಾಳವಾಗಿಸಿಕೊಂಡು, ಸಮುದಾಯಗಳ ನಡುವೆ ದ್ವೇಷ ಹರಡಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಕೊಳಕು ರಾಜಕಾರಣಿಗಳೇ ತುಂಬಿರುವ ಪುರುಷ ಪ್ರಧಾನ ರಾಜಕಾರಣದಲ್ಲಿ, ನಿಖರವಾದ ನೈತಿಕ ನಿಲುವುಗಳಿದ್ದ ಜೆಸಿಂದಾ ಈ ಕಾಲದ ರಾಜಕೀಯಕ್ಕೆ ಬಹುದೊಡ್ಡ ಅಪವಾದ. ಭೀಕರ ಹತ್ಯಾಕಾಂಡದ ನಂತರ (ಯಾವ ಧರ್ಮವನ್ನೂ ನಂಬದ, ಪಾಲಿಸದ) ಆಕೆ ಹಿಜಾಬ್ ತೊಟ್ಟು ಮಸೀದಿ ತೆರಳಿದ್ದು ನನ್ನ ಪ್ರಕಾರ one of those moments to be cherished forever.