Saturday, December 14, 2024
Homeಸುದ್ದಿವಿದೇಶ*ಯು.ಎ.ಇ.ಯಲ್ಲಿ ಭಾರತೀಯ ಏಜೆಂಟ್ ನಿಂದ ಬಿಡುಗಡೆಗೊಳಿಸಲ್ಪಟ್ಟ ತುಮಕೂರು ಮೂಲದ ಮಹಿಳೆ ಕೊನೆಗೂ ತಾಯ್ನಾಡಿಗೆ…..

*ಯು.ಎ.ಇ.ಯಲ್ಲಿ ಭಾರತೀಯ ಏಜೆಂಟ್ ನಿಂದ ಬಿಡುಗಡೆಗೊಳಿಸಲ್ಪಟ್ಟ ತುಮಕೂರು ಮೂಲದ ಮಹಿಳೆ ಕೊನೆಗೂ ತಾಯ್ನಾಡಿಗೆ…..

ಯು.ಎ.ಇ.ಯ ಅಜ್ಮಾನ್‌ನಲ್ಲಿ ಭಾರತೀಯ ಏಜೆಂಟ್‌ನಿಂದ ಕಿರುಕುಳಕ್ಕೊಳಗಾಗಿದ್ದ ಕರ್ನಾಟಕದ ತುಮಕೂರಿನ ನಿವಾಸಿ ಶ್ರೀಮತಿ ನಸೀಮಾ ಬೀ ರಶೀದ್ ಅವರು ಅಂತಿಮವಾಗಿ ಫೆಬ್ರುವರಿ 27ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಮ್ಮ ತವರೂರಿಗೆ ತಲುಪಿದರು.

ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಕರ್ನಾಟಕದ ಉಡುಪಿ ಮೂಲದ ವಕೀಲ ಹಾಗೂ ಸಮಾಜಸೇವಕರಾದ ಅಡ್ವ. ಪಿ.ಎ.ಹಮೀದ್ ಪಡುಬಿದ್ರಿಯವರ ಶತತ ಪ್ರಯತ್ನ ಮತ್ತು ಸಹಾಯದ ಫಲವಾಗಿ ಶ್ರೀಮತಿ. ನಸೀಮಾಬಿಯವರು ಸುರಕ್ಷಿತವಾಗಿ ತಮ್ಮ ತಾಯ್ನಾಡಿಗೆ ತಲುಪಿದರು.ನಿನ್ನೆ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಮಂಗಳೂರು ಅಂತರ್ರಾಷ್ಟೀಯ ವಿಮಾನ ನಿಲ್ದಾಣಕ್ಕೆ ಬಂದಳಿದು, ತಮ್ಮ ಕುಟುಂಬವನ್ನು ಸೇರಿಕೊಂಡರು.

ಅಡ್ವ.ಪಿ.ಎ.ಹಮೀದ್ ಪಡುಬಿದ್ರಿಯವರ ಈ ಪ್ರಯತ್ನಕ್ಕೆ ಯು.ಎ.ಇ.ಯ ಇಬ್ಬರು ಅನಿವಾಸಿ ಭಾರತೀಯರು ಮತ್ತು ಸಮಾಜ ಸೇವಕರಾದ ಪಿ.ಎ.ಮುತ್ತಲಿಬ್ ಪಡುಬಿದ್ರಿ ಮತ್ತು ಪಿ.ಎಂ.ಬಶೀರ್ ಉಮ್ಮರ್ ಫಾರೂಕ್ ರವರು ಸಹಕಾರ ನೀಡಿದರು.

ಪ್ರಕರಣದ ಸಂಕ್ಷಿಪ್ತ ವಿವರ:

ನಸೀಮಾಬೀ ರಶೀದ್ ರವರು ಈ ಹಿಂದೆಯೂ ದುಬೈನಲ್ಲಿ 2-3 ಬಾರಿ ಕೆಲಸ ಮಾಡಿದ್ದರು. ಇದನ್ನು ಮನಗಂಡ ಬೆಂಗಳೂರಿನ ಇಬ್ರಾಹಿಂ ಎಂಬ ಏಜೆಂಟ್‌, ಆಕರ್ಷಿತ ಪ್ಯಾಕೇಜ್‌ಗಳ ಪ್ರಲೋಭನೆಮಾಡಿ ಅವರನ್ನು ಏಪ್ರಿಲ್ 2021 ರಲ್ಲಿ ಮನೆಗೆಲಸಕ್ಕಾಗಿ ದುಬೈಗೆ ಕಳುಹಿಸಿದ್ದನು.

ಬೆಂಗಳೂರಿನ ಇಬ್ರಾಹಿಂ ಎಂಬವನು ಮ್ಯಾನ್ ಪವರ್ ಪೋರೈಕೆ ಮತ್ತು ವೀಸಾ ಸೇವೆಗಳ ಏಜೆಂಟ್ ಆಗಿದ್ದು, ಅವನು ಅಜ್ಮಾನ್ ನಲ್ಲಿರುವ ಶಾಫಿ ಎಂಬ ಮುಖ್ಯ ಏಜೆಂಟ್‌ನ ಉಪ-ಏಜೆಂಟ್ ಆಗಿದ್ದಾನೆ. ದುಬೈನಲ್ಲಿ ನೆಲೆಸಿರುವ ಅಫ್ಜಲ್ ಪಾಷಾ ಎಂಬವನು ಶಫಿಯ ಮತ್ತೊಬ್ಬ ಮಧ್ಯವರ್ತಿ. ಇಬ್ರಾಹಿಂ ಮತ್ತು ಅಫ್ಜಲ್ ಪಾಷಾ ಎಂಬಿಬ್ಬರು ಮುಖ್ಯ ಏಜೆಂಟ್ ಶಾಫಿಯಿಂದ ನಸೀಮಾಬೀಯವರ ಬಾಬ್ತು ತಲಾ ರೂ.1 ಲಕ್ಷ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಏಜೆಂಟ್ ಶಾಫಿ, ನಸೀಮಾಬೀಯವರನ್ನು ಎಮಿರಾತಿ ಮನೆಗೆ ಮನೆಗೆಲಸಕ್ಕಾಗಿ ಸರಬರಾಜು ಮಾಡಿ, ಎಮಿರಾತಿಯಿಂದ ಅವನು ಮೂರು ಸಾವಿರಕ್ಕೂ ಹೆಚ್ಚು ಯು.ಎ.ಇ ದಿರ್ಹಮ್ ಗಳನ್ನು ಪಡೆಯುತ್ತಿದ್ದನು. ಸುಮಾರು 6 ತಿಂಗಳುಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದ ನಸೀಮಾಬೀಯವರಿಗೆ ಏಜೆಂಟ್ 4 ತಿಂಗಳುಗಳ ಸಂಬಳವನ್ನು ನೀಡಿದ್ದನು; ಅದೂ ಕೂಡಾ, ನಸೀಮಾಬೀಯವರ ಬಾಬ್ತು ಅವನು ಸ್ವೀಕರಿಸುತ್ತಿದ್ದ ಮೊತ್ತದ 40% ಕ್ಕಿಂತಲೂ ಕಡಿಮೆ ಸಂಬಳ ನಸೀಮಾಬೀಯವರಿಗೆ ನೀಡುತ್ತಿದ್ದನು.

ನಸೀಮಾಬೀಯವರಿಗೆ ತಮ್ಮ ಅನಾರೋಗ್ಯದ ಕಾರಣದಿಂದ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ.ಹಾಗಾಗಿ ಅವರು, “ಅನಾರೋಗ್ಯದ ಕಾರಣದಿಂದ ತನಗೆ ಕೆಲಸ ಮಾಡಲು ಸಾಧ್ಯವಿಲ್ಲ; ದಯವಿಟ್ಟು ತನ್ನನ್ನು ಊರಿಗೆ ವಾಪಸ್ ಕಳುಹಿಸುವಂತೆ” ಏಜೆಂಟ್ ನಲ್ಲಿ ವಿನಂತಿಸಿದ್ದರು. ಆದರೆ, ಅವರ ಕೋರಿಕೆಯನ್ನು ಏಜೆಂಟ್ ನಿರಾಕರಿಸಿದನು.

ಅವರ ಆರೋಗ್ಯಸಮಸ್ಯೆಗಳ ಹೊರತಾಗಿಯೂ, ಅವರನ್ನು ಬೇರೆ ಎಮಿರಾತಿ ಮನೆಯಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತದರೂ, ಅದಕ್ಕೆ ನಸೀಮಾಬೀಯವರು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅವನು ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಮಾತ್ರವಲ್ಲದೆ, ಊರಿಗೆ ಮರಳಿ ಕಳುಹಿಸಲು 2 ಲಕ್ಷ ನೀಡುವಂತೆ ಒತ್ತಾಯಿಸಿದನು.

ಅಲ್ಲದೆ, ಅವರ ಮಗ, ಅಫ್ಸಾರ್, ಏಜೆಂಟಿಗೆ ಫೋನ್ ಮಾಡಿದಾಗಲೂ, ಅವನು ಎರಡು ಲಕ್ಷಹಣವನ್ನು ತನ್ನ ಖಾತೆಗೆ ಜಮಾಮಾಡಿದರೆ ಮಾತ್ರ ಅವರನ್ನು ವಾಪಸ್ ಕಳುಹಿಸುವುದಾಗಿ ಹೇಳಿದ್ದನಲ್ಲದೆ, ನಿನ್ನ ತಾಯಿಯ ಮೃತದೇಹವನ್ನು ನೋಡಲೂ ಸಾಧ್ಯವಿಲ್ಲವೆಂದು ಬೆದರಿಸಿದರು. ಅಷ್ಟೇ ಅಲ್ಲ, ಹೊರಗಿನ ಯಾವುದೇ ಸಂಪರ್ಕವಿಲ್ಲದ ಒಂದು ಕೊಠಡಿಯಲ್ಲಿ ಕೂಡಿಹಾಕಿ, ಕೆಲಸ ಮಾಡಲು ಹಿಂದೇಟು ಹಾಕಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು.

ಆಕೆಯ ಮಗ, ಅಫ್ಸಾರ್, ಸೌದಿಯಲ್ಲಿರುವ ಸಮಾಜಸೇವಕರೂ, ವಕೀಲರೂ ಆದ ಅಡ್ವ.ಪಿ. ಎ. ಹಮೀದ್ ಪಡುಬಿದ್ರಿಯವರನ್ನು ಶ್ರೀಮತಿ. ಸಬೀಹಾ ತುಮಕೂರುರವರ ಮುಖೇನ ಸಂಪರ್ಕಿಸಿ, ತನ್ನ ತಾಯಿಯವರನ್ನು ಏಜೆಂಟ್ ನಿಂದ ರಕ್ಷಿಸುವಂತೆ ವಿನಂತಿಸಿದರು.

ಅಡ್ವ.ಪಿ. ಎ.ಹಮೀದ್ ಪಡುಬಿದ್ರಿಯವರು ತಕ್ಷಣವೇ ದುಬೈನಲ್ಲಿರುವ ಭಾರತೀಯ ದೂತಾವಾಸವನ್ನು ಸಂಪರ್ಕಿಸಿ, ಕೂಡಲೇ ಆಕೆಯ ಪ್ರಕರಣವನ್ನು ಪರಿಶೀಲಿಸುವಂತೆ ವಿನಂತಿಸಿದರು. ಅಲ್ಲದೆ, ಈ ಸಂಬಂಧ ದುಬೈನಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೂ ಮನವಿ ಮಾಡಿದ್ದರು.

ಅಡ್ವ.ಪಿ.ಎ.ಹಮೀದ್ ರವರ ವಿನಂತಿಯಾಧಾರದಲ್ಲಿ ಮಾನವ ಹಕ್ಕುಆಯೋಗ ಮತ್ತು ದೂತವಾಸ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಕಾನೂನು ಕ್ರಮ ಕೈಗೊಳ್ಳುವ ಮೊದಲು ಈ ಮಹಿಳೆಯನ್ನು ತಕ್ಷಣವೇ ಭಾರತಕ್ಕೆ ವಾಪಸ್ ಕಳುಹಿಸುವಂತೆ ಏಜೆಂಟ್‌ಗೆ ಎಚ್ಚರಿಕೆ ನೀಡಿತು. ಯಾವುದೇ ವಿಳಂಬ ಮಾಡದೆ ಅವರನ್ನು ವಾಪಸ್ ಕಳುಹಿಸುವುದಾಗಿ ಏಜೆಂಟ್ ಒಪ್ಪಿಕೊಂಡನು.

ಆದರೂ, ಅವನು ಅವರ ಮಗನಿಗೆ ಫೋನ್ ಮಾಡಿ, ಕನಿಷ್ಠ ಟಿಕೆಟ್ ಮೊತ್ತ (ರೂ.25 ಸಾವಿರ) ವಾದರೂ ತನ್ನ ಖಾತೆಗೆ ಜಮಾಮಾಡುವಂತೆ ಒತ್ತಾಯಿಸುತ್ತಿದ್ದನು.

ಇದಕ್ಕೆ, ಅಡ್ವ. ಪಿ.ಎ.ಹಮೀದ್ ರವರು “ಏಜೆಂಟರಿಗೆ ಒಂದು ಪೈಸೆಯನ್ನೂ ಕೊಡಬೇಡಿ, ಏಕೆಂದರೆ ರಿಟರ್ನ್ ಟಿಕೆಟ್ ಭರಿಸುವುದು ಏಜೆಂಟರ ಜವಾಬ್ದಾರಿಯಾಗಿದೆ” ಸಲಹೆ ನೀಡಿದ್ದರು. ಅದರಂತೆ, ಅವರ ಮಗ ಟಿಕೆಟ್ ಮೊತ್ತವನ್ನೂ ಠೇವಣಿ ಮಾಡಲು ನಿರಾಕರಿಸಿದರು.

ಕೊನೆಗೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಏಜೆಂಟನೇ ತನ್ನ ಕೈಯಿಂದ ಅವರಿಗೆ ಟಿಕೆಟ್ ಮಾಡಿ, ನಿನ್ನೆಯಷ್ಟೇ ಆಕೆಯನ್ನು ಮಂಗಳೂರು ಅಂತರ್ರಾಷ್ಟೀಯ ವಿಮಾನ ನಿಲ್ದಾಣ ಮೂಲಕ ಊರಿಗೆ ಕಳುಹಿಸಿದ್ದಾನೆ. ಮಂಗಳೂರಿನಲ್ಲಿ ಅವರ ಮಗ ಮತ್ತು ಸಂಬಂಧಿಕರು ಅವರನ್ನು ಬರಮಾಡಿಕೊಂಡು, ಅವರು ಇಂದು ಬೆಳಿಗ್ಗೆ ಸುರಕ್ಷಿತವಾಗಿ ತುಮಕೂರಿಗೆ ತಲುಪಿದರು.

ನಸೀಮಾ ಬೀ ಮತ್ತು ಅವರ ಕುಟುಂಬವು ಅಡ್ವ. ಪಿ.ಎ.ಹಮೀದ್ ಪಡುಬಿದ್ರಿಯವರು ಮತ್ತು ಇತರ ಇಬ್ಬರು ಯುಎಇ ಅನಿವಾಸಿ ಭಾರತೀಯರು ಅವರನ್ನು ಏಜೆಂಟ್ ನಿಂದ ರಕ್ಷಿಸಿ, ತಮ್ಮ ಮಾನವೀಯತೆಯನ್ನು ಮೆರೆದದ್ದಕ್ಕಾಗಿ ಅಪಾರ ಕ್ರತಜ್ನತೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ಅವರು ದುಬೈನಲ್ಲಿರುವ ಭಾರತೀಯ ದೂತಾವಾಸಕ್ಕೆ, ವಿಶೇಷವಾಗಿ ದುಬೈನಲ್ಲಿರುವ ಕಾನ್ಸುಲೇಟ್ ಶ್ರೀ ಜಿತೇಂದ್ರ ಸಿಂಗ್ ನೇಗಾ ಮತ್ತು ಮತ್ತು ಮಾನವ ಹಕ್ಕುಗಳ ಆಯೋಗದ ಸಹಾಯಕ್ಕಾಗಿ ಧನ್ಯವಾದ ವ್ಯಕ್ತಪಡಿಸಿದರು.