ಬೆಂಗಳೂರು: ದಿವಂಗತ ನಟ ಶಂಕರನಾಗ್ ಅವರು ಪುರುಷ, ಮಹಿಳೆ, ಮಕ್ಕಳು, ನಟರು, ಲೈಟ್‌ಬಾಯ್‌ಗಳು ಹೀಗೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದು ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್ ಹೇಳಿದರು.
2021ನೇ ಸಾಲಿನ ಶಂಕರನಾಗ್ ನಾಟಕೋತ್ಸವದ ಅಂಗವಾಗಿ ರಂಗಪಯಣ ಆಯೋಜಿಸಿದ್ದ ‘ರಂಗ ಧಾರಿಣಿ’ ಮಹಿಳಾ ರಂಗೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗಕರ್ಮಿ ಹನುಮಕ್ಕ ಅವರಿಗೆ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಂಕರನಾಗ್ ಅವರು ಪಾದರಸದಂತೆ ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಅವರ ನೆನಪಿನಲ್ಲಿ ಮಹಿಳಾ ಪ್ರಧಾನ ನಾಟಕ ಆಯೋಜಿಸಲಾಗುತ್ತಿರುವುದು ಅರ್ಥಪೂರ್ಣ. ಗಂಡು ಮತ್ತು ಹೆಣ್ಣು ಸಮಾನವಾಗಿ ನಡೆದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಪ್ರಶಸ್ತಿ ಪುರಸ್ಕೃತ ಹನುಮಕ್ಕ, ನಮ್ಮದು ಬಡ ಕುಟುಂಬ. ತಂದೆ ವೃತ್ತಿ ರಂಗಭೂಮಿ ಕಲಾವಿದರಾಗಿದ್ದರು. ಕಿರಿಯ ಮಗಳಾದ ನಾನು ರಂಗಭೂಮಿಗೆ ಹೋಗುವುದು ಅವರಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಜನ ಹಾಗೂ ಸಮಾಜ ಸರಿಯಿಲ್ಲ ಎಂದು ಹೇಳುತ್ತಿದ್ದರು. ತಂದೆಯ ಹೆಸರು ಉಳಿಸಬೇಕು ಎಂಬ ಉದ್ದೇಶದಿಂದ ಅವರ ವಿರೋಧ ಧಿಕ್ಕರಿಸಿ ನೀನಾಸಂ ನಾಟಕ ಶಿಬಿರ ಸೇರಿದೆ. ಇದರಿಂದ ಕುಪಿತಗೊಂಡ ಅಪ್ಪ ಮನೆಗೆ ಬರದಂತೆ ಸೂಚಿಸಿದ್ದರು. ಪತ್ರ ಬರೆದು ಯೋಗಕ್ಷೇಮವನ್ನೂ ವಿಚಾರಿಸಿರಲಿಲ್ಲ. ಕ್ರಮೇಣ ನನ್ನ ಸಾಧನೆ ಕಂಡು ಅವರೇ ಖುಷಿಪಟ್ಟಿದ್ದರು ಎಂದು ಸ್ಮರಿಸಿದರು.
‘ಈಗಿನ ಹೆಣ್ಣು ಮಕ್ಕಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕು. ಮಕ್ಕಳನ್ನು ರಂಗಭೂಮಿಗೆ ಕಳುಹಿಸಲು ಪೋಷಕರೂ ಮನಸ್ಸು ಮಾಡಬೇಕು’ ಎಂದು ಮನವಿ ಮಾಡಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಸಮಾಜವನ್ನು ಮುನ್ನಡೆಸುವಲ್ಲಿ ಮಹಿಳೆಯ ಪಾತ್ರ ಹೆಚ್ಚಿದೆ. ಬೇರೆ ಬೇರೆ ವಿಭಾಗಗಳ ಮಹಿಳೆಯರ ಸಮಸ್ಯೆಗಳನ್ನು ಸಮಾಜಕ್ಕೆ ಪರಿಚಯಿಸುವಂತಹ ನಾಟಕಗಳನ್ನು ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.