ದಾವಣಗೆರೆ: ತರಾತುರಿಯಲ್ಲಿ, ಏಕಪಕ್ಷೀಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ರಾಜ್ಯದಲ್ಲಿ ಜಾರಿ ಮಾಡುತ್ತಿರುವುದನ್ನು ವಿರೋಧಿಸಿ ಮುಖ್ಯಮಂತ್ರಿಗೆ ಹಾಗೂ ಎಲ್ಲ ಎಂಎಲ್‌ಎ, ಎಂಎಲ್‌ಸಿಗಳಿಗೆ ರಾಜ್ಯದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ರಾಜ್ಯ ಸರ್ಕಾರವು ಈ ಕೋವಿಡ್ ಸಂದರ್ಭದಲ್ಲಿ ಯಾವುದೇ ಪ್ರಜಾತಾಂತ್ರಿಕ ಚರ್ಚೆಗಳಿಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪದವಿ ಹಂತದಲ್ಲಿ ತರಲು ನಿರ್ಧರಿಸಿದೆ. ಶಿಕ್ಷಣ ಪ್ರೇಮಿಗಳು ಹಾಗೂ ಶಿಕ್ಷಣ ತಜ್ಞರು ರಾಜ್ಯ ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಶಾಸಕರು ಧ್ವನಿ ಎತ್ತಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಕಾಲದ ಪರೀಕ್ಷೆಯಲ್ಲಿ ಸಾಬೀತಾಗದ ಪಠ್ಯ ಶಾಸ್ತ್ರ, ಕಲಿಕೆ, ಬೋಧನೆ ಹಾಗೂ ಜ್ಞಾನಾರ್ಜನೆಗೆ ಮಾರಕವಾಗಿರುವ ಬಹು ಶಿಸ್ತಿನ, ಬಹು ನಿರ್ಗಮನದ 3/4 ಪದವಿ ಕೋರ್ಸ್ ಗಳನ್ನು ರದ್ದುಗೊಳಿಸಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಹಾಗೂ ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.