Saturday, December 14, 2024
Homeಸುದ್ದಿರಾಜ್ಯ‘ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ನಾನು ಕಾರಣವಲ್ಲ’ ...

‘ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ನಾನು ಕಾರಣವಲ್ಲ’ ನೂತನ ಸಚಿವ ಆನಂದ್‌ ಸಿಂಗ್‌ ಸ್ಪಷ್ಟನೆ

ಬಳ್ಳಾರಿ: ‘ಶಾಸಕ ಜಿ. ಸೋಮಶೇಖರರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ತಾವು ಕಾರಣವಲ್ಲ; ಅವರ ವಿರುದ್ಧ ಯಾವುದೇ ಕುತಂತ್ರ ಮಾಡಿಲ್ಲ’ ಎಂದು ನೂತನ ಸಚಿವ ಆನಂದ್‌ಸಿಂಗ್‌ ಸ್ಪಷ್ಟಪಡಿಸಿದರು.

ನಿರೀಕ್ಷಿತ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಮಾಡಿರುವ ಸಿದ್ಧತೆ ಹಾಗೂ ಪ್ರವಾಹದಿಂದಾದ ಹಾನಿ ಕುರಿತು ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಮಧ್ಯಾಹ್ನ ನಗರಕ್ಕೆ ಬಂದ ಆನಂದ್‌ ಸಿಂಗ್‌ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

‘ಸೋಮಶೇಖರರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದಂತೆ ನಾನು ಯಾವುದೇ ಕುತಂತ್ರ ಮಾಡಿಲ್ಲ. ಕುತಂತ್ರ ಮಾಡುವುದನ್ನು ಜೀವನದಲ್ಲಿ ಕಲಿತಿಲ್ಲ’ ಎಂದು ಅವರು ಮಾಧ್ಯಮ‍ ಪ್ರತಿನಿಧಿಗಳಿಗೆ ತಿಳಿಸಿದರು.

‘ಸೋಮಶೇಖರರೆಡ್ಡಿ ನನಗೆ ಅಣ್ಣನಿದ್ದಂತೆ. ಇಬ್ಬರ ನಡುವೆ ಸುಮಧುರ ಬಾಂಧವ್ಯವಿದೆ. ತಾವು ಸಚಿವರಾದರೆ ರೆಡ್ಡಿ ಆದಂತೆ. ಅವರು ಸಚಿವರಾದರೂ ತಾವಾದಂತೆ’ ಎಂದು ಆನಂದ್‌ಸಿಂಗ್‌ ಹೇಳಿದರು.

‘ನಾನು ಈ ಹಿಂದೆ ಯಡಿಯೂರಪ್ಪನವರ ಸಂಪುಟದಲ್ಲಿ ಹೊಂದಿದ್ದ ಖಾತೆಯನ್ನೇ ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ನಾನು ಕೇಳಿದ ಖಾತೆ ಸಿಕ್ಕರೆ ಸಂತೋಷ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸದ್ಯಕ್ಕೆ ಮುಖ್ಯಮಂತ್ರಿ, ಬಳ್ಳಾರಿ ಉಸ್ತುವಾರಿಯನ್ನು ನನಗೆ ವಹಿಸಿದ್ದಾರೆ. ಹಿಂದೆ ಯಾರ್‍ಯಾರು, ಯಾವ್ಯಾವ ಜಿಲ್ಲೆಗಳ ಹೊಣೆ ಹೊತ್ತಿದ್ದರೋ ಅದೇ ಜಿಲ್ಲೆಗಳ ಜವಾಬ್ದಾರಿ ಮುಂದುವರಿಸಲಾಗಿದೆ’ ಎಂದು ಆನಂದ್‌ ಸಿಂಗ್ ವಿವರಿಸಿದರು.

ಇದೇ ಸಮಯದಲ್ಲಿ ಸಚಿವರು ಬಳ್ಳಾರಿ ನಗರ ದೇವತೆ ಕನಕ ದುರ್ಗಮ್ಮ ಗುಡಿಗೆ ತೆರಳಿ ಪೂಜೆ ಸಲ್ಲಿಸಿದರು. ಸಚಿವರಿಗೆ ಅವರ ಅಭಿಮಾನಿಗಳು ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.