ಹೊಸದಿಲ್ಲಿ: ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತು ಕಲಾಪದಲ್ಲಿ ಅಂಗೀಕಾರ ಪಡೆದು ಇದೀಗ ಹಿಂಪಡೆಯುವುದಾಗಿ ಹೇಳಿರುವ 3 ಕೃಷಿ ತಿದ್ದುಪಡಿ ಮಸೂದೆ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದು ಶುಕ್ರವಾರಕ್ಕೆ ಒಂದು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್, ಹರ್ಯಾಣ ಭಾಗದ ರೈತರು ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಭಾಗಕ್ಕೆ ಹಿಂತಿರುಗಿದ್ದು ಈ ದಿನವನ್ನು ಆಚರಿಸಿ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭಕ್ಕೆ ಮುನ್ನ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ.
ದೆಹಲಿ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ನಿರ್ದೇಶನದಂತೆ ರೈತರು ಗಡಿಭಾಗದಲ್ಲಿ ಪ್ರತಿಭಟನಾ ನಿರತರಾಗಿ ಕೇಂದ್ರ ಸರ್ಕಾರದ ವಿರುದ್ಧ ಇನ್ನಷ್ಟು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು ರೈತರ ಉದ್ದೇಶವಾಗಿದೆ.
ನಮ್ಮ ಟ್ರಾಕ್ಟರ್ ಟ್ರಾಲಿಗಳಲ್ಲಿ ಶೀತವನ್ನು ನಿಭಾಯಿಸಲು ಎಲ್ಲಾ ಸೌಲಭ್ಯಗಳಿವೆ, ಕಳೆದ ಚಳಿಗಾಲದಲ್ಲಿ ನಾವು ಮಾಡಿದಂತೆಯೇ ಈ ಬಾರಿ ಕೂಡ ಎಲ್ಲಾ ಸೌಲಭ್ಯ ಮಾಡಿಕೊಂಡು ಪ್ರತಿಭಟನೆಗೆ ಸಜ್ಜಾಗುತ್ತಿದ್ದೇವೆ ಎಂದು ರೈತ ಪ್ರೀತ್ಪಾಲ್ ಸಿಂಗ್ ಹೇಳುತ್ತಾರೆ.
ಟಿಕ್ರಿ ಗಡಿಯ ಪಕೋರಾ ಚೌಕ್‌ನಲ್ಲಿ ದೊಡ್ಡ ಟೆಂಟ್ ಅನ್ನು ಹಾಕಲಾಗುತ್ತಿದೆ. ಇನ್ನೊಂದು ಮುಖ್ಯ ವೇದಿಕೆ ಸಿಂಘು ಗಡಿಯಲ್ಲಿ ಟೆಂಟ್ ನ್ನು ಹಾಕಲಾಗಿದೆ. ರೈತ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯ ಪ್ರಾರಂಭಿಸಿವೆ.
ಮೋಗಾ, ಬಟಿಂಡಾ, ಫರೀದ್‌ಕೋಟ್, ಸಂಗ್ರೂರ್ ಮತ್ತು ಅಮೃತಸರದಿಂದ ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಬರುವುದಲ್ಲದೆ, ರೈತರು ಎರಡು ಗಡಿ ಕೇಂದ್ರಗಳಿಗೆ ಕಾರುಗಳಲ್ಲಿ ಮತ್ತು ಸೋನಿಪತ್ ನಲ್ಲಿ ರೈಲುಗಳಲ್ಲಿ ಬರುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್ ಗ್ರೂಪ್), ಪಂಜಾಬ್, ಪ್ರಧಾನ ಕಾರ್ಯದರ್ಶಿ ಓಂಕಾರ್ ಸಿಂಗ್, ಹೆಚ್ಚಿನ ರೈತರು ಗೋಧಿಯನ್ನು ಬಿತ್ತನೆ ಮಾಡಿದ್ದಾರೆ. ನವೆಂಬರ್ 26 ರಂದು ರೈತರ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದರು.
ಹರಿಯಾಣದ ರೈತರೂ ಎರಡು ಗಡಿ ಕೇಂದ್ರಗಳಿಗೆ ಬರುತ್ತಿದ್ದಾರೆ. ನಮ್ಮ ಇತರೆ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತ ಮುಖಂಡ ಇಂದರ್‌ಜೀತ್ ಸಿಂಗ್ ಹೇಳಿದ್ದಾರೆ. “ಪಂಜಾಬ್‌ನ ಪ್ರತಿ ಹಳ್ಳಿಯಿಂದ 50 ರಿಂದ 500 ರೈತರು ದೆಹಲಿ ಗಡಿಗಳಿಗೆ ಹೋಗಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳಿಂದ ಟಿಕ್ರಿ ಗಡಿಯಲ್ಲಿ ಒಂದು ಲಕ್ಷ ರೈತರು ಸೇರುವ ನಿರೀಕ್ಷೆಯಿದೆ” ಎಂದು ಭಾರತೀಯ ಕಿಸಾನ್ ಸಂಘಟನೆಯ (BKU) ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿ ಕಲಾನ್ ಹೇಳಿದ್ದಾರೆ.
ದೆಹಲಿಯ ಗಡಿಗಳು, ರಾಜ್ಯ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗಳೊಂದಿಗೆ ಚಳವಳಿಯ ಒಂದು ವರ್ಷವನ್ನು ಆಚರಿಸಲು ರೈತರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು SKM ಹೇಳಿದೆ. ದೆಹಲಿಯಿಂದ ದೂರದಲ್ಲಿರುವ ರಾಜ್ಯಗಳಲ್ಲಿ, ರ್ಯಾಲಿಗಳು, ಧರಣಿಗಳು ಮತ್ತು ಇತರ ಕಾರ್ಯಕ್ರಮಗಳೊಂದಿಗೆ ದಿನವನ್ನು ಆಚರಿಸಲಾಗುತ್ತಿದೆ.
ಕರ್ನಾಟಕದಲ್ಲಿ ರೈತರು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡುತ್ತಾರೆ. ತಮಿಳುನಾಡು, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಜಂಟಿಯಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಯ್ಪುರ ಮತ್ತು ರಾಂಚಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳು ನಡೆಯಲಿವೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ರ್ಯಾಲಿಯನ್ನು ಯೋಜಿಸಲಾಗಿದೆ. ನವೆಂಬರ್ 27 ರಂದು ಸಿಂಘು ಮೋರ್ಚಾದಲ್ಲಿ ಎಸ್‌ಕೆಎಂ ಸಭೆ ನಡೆಯಲಿದ್ದು, ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದರು.