ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಇಲ್ಲ. ಈ ಕುರಿತಂತೆ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪುನರುಚ್ಚರಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಜನಜೀವನ ಎಂದಿನಂತೆ ನಡೆಯಬೇಕು. ಹೆಚ್ಚು ಜನರು ಸೇರುವಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಘಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಕೋವಿಡ್ ಬಗ್ಗೆ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ. ಕ್ಲಸ್ಟರ್ ಆಗಿರುವಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದರು.
ಕೋವಿಡ್ ಪರೀಕ್ಷೆ ಹೆಚ್ಚಳ:
ಕೋವಿಡ್ ಹೊಸ ತಳಿ ಒಮಿಕ್ರಾನ್ ಕುರಿತು ನಿಗಾ ಇರಿಸಲಾಗಿದೆ. ಈಗಿರುವ ಡೆಲ್ಟಾ ತಳಿಯಿಂದ ಅಲ್ಲಲ್ಲಿ ಕ್ಲಸ್ಟರ್ ಆಗಿದೆ. ಎರಡು ಹಂತಗಳಲ್ಲಿ ಇದನ್ನು ನಿಭಾಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡು ತ್ತಿದ್ದು, ವೈಜ್ಞಾನಿಕವಾಗಿ ಕೈಗೊಳ್ಳಬೇಕಿರುವ ಕ್ರಮಗಳನ್ನು ಕೈಗೊಂಡಿದೆ., ಹೆಚ್ಚಿನ ತನಿಖೆಗೆ ಎನ್.ಸಿ.ಬಿ.ಎಸ್ ಗೂ ಮಾದರಿಗಳನ್ನು ಕಳುಹಿಸಲಾಗಿದೆ. ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ವಿಶೇಷ ನಿಗಾ ಇರಿಸಿದ್ದು, ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ಕ್ಲಸ್ಟರ್ ಗಳ ಬಗ್ಗೆ ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡಿದ್ದು, ಅಲ್ಲಿ ಪಾಲ್ಗೊಂಡಿದ್ದವರ ಪರೀಕ್ಷೆ, 7 ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಸುಮಾರು 4 ಸಾವಿರ ಜನರ ಪರೀಕ್ಷೆಯನ್ನು ಮಾಡಲಾಗಿದೆ. ಅದೇ ರೀತಿ ಮೈಸೂರು, ಹಾಸನ ಮತ್ತು ಬೆಂಗಳೂರಿನ ಆನೇಕಲ್y ನಲ್ಲಿನ ಕಸ್ಟರ್ ಗಳಲ್ಲಿ ತಪಾಸಣೆಯನ್ನು ತೀವ್ರ ಗೊಳಿಸಲಾಗಿದೆ.
ಸಾಮಾನ್ಯ ಪರೀಕ್ಷೆಗಳನ್ನು ಹೆಚ್ಚಿಸಲೂ ಸಹ ಸೂಚನೆ ನೀಡಲಾಗಿದೆ ಎಂದರು.
ಇಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ರಾಜ್ಯಗಳ ಜೊತೆಗೆ ನಡೆಸುವ ಪರಿಶೀಲನಾ ಸಭೆ ನಡೆಸುತ್ತಿದ್ದು, ಸಭೆಯ ನಂತರ ಪರಿಸ್ಥಿತಿ ಅವಲೋಕಿಸಿ ಕ್ರಮ ವಹಿಸಲಾಗುವುದು ಎಂದರು.