Saturday, December 14, 2024
Homeಸುದ್ದಿಲಾರಿ–ಕಾರು ನಡುವೆ ಮುಖಾಮುಖಿ ಡಿಕ್ಕಿ ಭೀಕರ ಅಪಘಾತ: ನಾಲ್ವರ ಸಾವು

ಲಾರಿ–ಕಾರು ನಡುವೆ ಮುಖಾಮುಖಿ ಡಿಕ್ಕಿ ಭೀಕರ ಅಪಘಾತ: ನಾಲ್ವರ ಸಾವು

ರಟ್ಟೀಹಳ್ಳಿ: ತಾಲ್ಲೂಕಿನ ಕಡೂರ ಗ್ರಾಮದ ಬಳಿ ದಾಸನಹಳ್ಳದ ತಿರುವಿನಲ್ಲಿ ಶನಿವಾರ ಸಂಜೆ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದರೆ, ಇಬ್ಬರು ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಅಸುನೀಗಿದರು.

ಶಿಕಾರಿಪುರ ತಾಲ್ಲೂಕಿನ ಮಟ್ಟಿಕೋಟೆ ಗ್ರಾಮದ ಶಂಕರಗೌಡ ನಾಗಪ್ಪನವರ (40), ಶಾಂತಾ ಹೊಟ್ಟೀಗೌಡ್ರ (30), ರಘು ಹೊಟ್ಟಿಗೌಡ್ರ (12), ಪುನೀತ (12) ಮೃತಪಟ್ಟವರು.

6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದೊಯ್ಯಲಾಯಿತು.

ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿ ತುಮ್ಮಿನಕಟ್ಟಿ ಮಾರ್ಗವಾಗಿ ಅಣ್ಣ–ತಮ್ಮಂದಿರ ಎರಡು ಕಾರುಗಳು ಊರಿಗೆ ಮರಳುತ್ತಿದ್ದವು. ಈ ಸಂದರ್ಭ ಎದುರಿಗೆ ಮೆಕ್ಕೆಜೋಳ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಮುಂದೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ನಂತರ ಹಿಂದೆ ಇದ್ದ ಕಾರು ಕೂಡ ಬಂದು ಅಪ್ಪಳಿಸಿದೆ.

ಮಾಹಿತಿ ತಿಳಿಯುತ್ತಲೇ ರಟ್ಟೀಹಳ್ಳಿ ಠಾಣೆಯ ಪಿ.ಎಸ್.ಐ. ಕೃಷ್ಣಪ್ಪ ತೋಪಿನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು, ತುರ್ತು ಕ್ರಮ ಕೈಗೊಂಡರು.