Saturday, December 14, 2024
Homeರಾಜ್ಯಬೆಂಗಳೂರು ವಿಭಾಗವಾರಾಂತ್ಯ ಕರ್ಫ್ಯೂ ರದ್ದು

ವಾರಾಂತ್ಯ ಕರ್ಫ್ಯೂ ರದ್ದು

ಬೆಂಗಳೂರು: ಸರ್ಕಾರ ವಾರಾಂತ್ಯ ಕರ್ಫ್ಯೂವನ್ನು ಕೈಬಿಡಲು ನಿರ್ಧರಿಸಿದೆ. ರಾತ್ರಿ ಕರ್ಫ್ಯೂ ಸೇರಿ ಉಳಿದ ಎಲ್ಲಾ ನಿಯಮಗಳು ಈಗಿರುವಂತೆ ಮುಂದುವರಿಯಲಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರರಿಗೆ ಕಂದಾಯ ಸಚಿವ ಆರ್‌.ಅಶೋಕ ವಿವರ ನೀಡಿದರು,

ಕೋವಿಡ್‌ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ 5 ಇದ್ದು, ಒಂದು ವೇಳೆ ಆ ಪ್ರಮಾಣ ಶೇ 5 ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು ಎಂದರು.

ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರರಿಯುತ್ತದೆ. ರಾತ್ರಿ ವೇಳೆಯಲ್ಲಿ ಕ್ಲಬ್‌, ಪಬ್, ಬಾರ್‌ಗಳಲ್ಲಿ ಹೆಚ್ಚು ಜನ ಸೇರುತ್ತಾರೆ ಮತ್ತು ಪಾರ್ಟಿಗಳು ನಡೆಯುತ್ತವೆ. ಆದ್ದರಿಂದ ರಾತ್ರಿ ಕರ್ಫ್ಯೂ ಮುಂದುವರಿಸಲಾಗಿದೆ. ಇದು ನಮ್ಮ ರಾಜ್ಯ ಮಾತ್ರ ಅಲ್ಲ, ಕೋವಿಡ್‌ ಹೆಚ್ಚಾಗಿರುವ ಎಲ್ಲ ರಾಜ್ಯಗಳಲ್ಲೂ ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಮುಂದೆ ರಾಜ್ಯವನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗುತ್ತದೆ. ವಾರಾಂತ್ಯ ಕರ್ಫ್ಯೂ ಹೊರತುಪಡಿಸಿ ಉಳಿದ ಎಲ್ಲ ನಿಯಮಗಳೂ ಜಾರಿಯಲ್ಲಿರುತ್ತವೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.

ರಾಜ್ಯದಲ್ಲಿ ಒಟ್ಟು 2,93,241 ಸಕ್ರಿಯ ಪ್ರಕರಣಗಳಿದ್ದು, 2.86 ಲಕ್ಷ ಮಂದಿ ಮನೆಗಳಲ್ಲೇ ಪ್ರತ್ಯೇಕ ವಾಸವಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5343 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 340 ಜನ ಐಸಿಯುನಲ್ಲಿದ್ದು, 127 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿಯೇ ತಜ್ಞರು ವಾರಾಂತ್ಯ ಕರ್ಫ್ಯೂ ಕೈಬಿಡಲು ಸಲಹೆ ನೀಡಿದರು ಎಂದರು.

ಬೆಂಗಳೂರು ಬಿಟ್ಟು ಉಳಿದೆಡೆ ಶಾಲೆ ಕಾಲೇಜು ಆರಂಭ:

ಬೆಂಗಳೂರು ಉಳಿದ ಎಲ್ಲ ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಿ ಶಾಲೆ–ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಬೆಂಗಳೂರಿನಲ್ಲಿ ಪ್ರಕರಣಗಳು ಅತಿ ಹೆಚ್ಚು ಇರುವುದರಿಂದ ರಜೆ ಜ.29ರ ವರೆಗೆ ಮುಂದುವರಿಯಲಿದೆ. ಮುಂದಿನ ಶುಕ್ರವಾರ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಉಳಿದ ಜಿಲ್ಲೆಗಳಲ್ಲಿ ಶಾಲೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗುವುದು. ಇಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾದರೆ ವಿಭಾಗಾಧಿಕಾರಿ, ತಹಶೀಲ್ದಾರರು, ಬಿಇಒ ಮತ್ತಿತ್ತರ ಅಧಿಕಾರಿಗಳು ಸೇರಿ ಆಯಾ ಶಾಲಾ–ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರಕರಣ ಅತಿ ಹೆಚ್ಚು ಇದ್ದರೆ 7 ದಿನ ಮತ್ತು ಕಡಿಮೆ ಇದ್ದರೆ 3 ದಿನ ರಜೆ ನೀಡಲಾಗುವುದು. ಆ ದಿನಗಳು ಮುಗಿಯುತ್ತಿದ್ದಂತೆ ಮತ್ತೆ ಯಥಾ ಪ್ರಕಾರ ತರಗತಿಗಳು ಆರಂಭವಾಗುತ್ತವೆ ಎಂದು ನಾಗೇಶ್‌ ಹೇಳಿದರು.

ವಿವರ: ಮದುವೆ ಒಳಾಂಗಣ 100 ಜನ, ಹೊರಾಂಗಣ 200 ಜನಕ್ಕೆ ಅವಕಾಶ

ಮೆರವಣಿಗೆ, ಜಾತ್ರೆ, ರ್‍ಯಾಲಿ, ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ

ಹೊಟೇಲ್‌, ರೆಸ್ಟೋರೆಂಟ್‌, ಬಾರ್‌, ಕ್ಲಬ್‌ ಮತ್ತಿತರ ಕಡೆಗಳಲ್ಲಿ ಶೇ 50:50 ನಿಯಮ

ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರಗಳಲ್ಲಿ ಈಗಿರುವ ನಿಯಮಗಳೇ ಮುಂದುವರಿಯಲಿದೆ