ಚಿಕ್ಕಮಗಳೂರು: ತಾಲ್ಲೂಕಿನ ಕುರಿಚಿಕ್ಕನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿ ಹಿಂಡಿಗೆ ವಾಹನ ಡಿಕ್ಕಿ ಹೊಡೆದು 9 ಕುರಿಗಳು ಸೋಮವಾರ ಮೃತಪಟ್ಟಿವೆ.
ರಾತ್ರಿ 7.30ರ ಹೊತ್ತಿನಲ್ಲಿ ಅಪಘಾತ ಸಂಭವಿಸಿದೆ. ಈ ಕುರಿಗಳು ಕುರಿ ಚಿಕ್ಕನಹಳ್ಳಿಯ ರಂಗೇಗೌಡ ಅವರವು. ಏಳು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರಿಗಳಿಗೆ ಗುದ್ದಿದ ವಾಹನದ ನಂಬರ್ ಸಿಕ್ಕಿದೆ. ವಾಹನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.