ನಾಯಕ ವಿರಾಟ್ ಕೊಹ್ಲಿ ಅವರಿಗಾಗಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲ್ಲುವಂತೆ ಟೀಮ್ ಇಂಡಿಯಾ ಆಟಗಾರರಿಗೆ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಕರೆ ನೀಡಿದ್ದಾರೆ.
ದುಬೈ: ನಾಯಕ ವಿರಾಟ್ ಕೊಹ್ಲಿ ಅವರಿಗಾಗಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲ್ಲುವಂತೆ ಟೀಮ್ ಇಂಡಿಯಾ ಆಟಗಾರರಿಗೆ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಕರೆ ನೀಡಿದ್ದಾರೆ.
ಟ್ವೆಂಟಿ-20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಇದರಂತೆ ಹೇಳಿಕೆ ನೀಡಿರುವ ರೈನಾ, ನಾಯಕ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರಿಂದ ಯೋಗ್ಯವಾದ ವಿದಾಯಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ಧೋನಿ ಅನುಭವ ಸಂಪತ್ತಿನ ಪ್ರಯೋಜನ ಪಡೆಯಲು ಉತ್ಸುಕರಾಗಿರುವ ಕೊಹ್ಲಿ ವಿಶ್ವಕಪ್‌ನಲ್ಲಿ ಭಾರತದ ಮುಂದಿರುವ ಸಂದೇಶ ಸರಳವಾಗಿದೆ – ‘ವಿರಾಟ್ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಿ’ ಎಂದು ರೈನಾ ಹೇಳಿದ್ದಾರೆ.
‘ಬಹುಶಃ ನಾಯಕರಾಗಿ ಕೊಹ್ಲಿಗಿದು ಕೊನೆಯ ಅವಕಾಶವಾಗಿದೆ. ಆದ್ದರಿಂದ ಅದನ್ನು ಸಾಧಿಸಬಹುದು ಎಂದು ಪ್ರತಿಯೊಬ್ಬರಲ್ಲೂ ನಂಬಿಕೆ ಮೂಡಿಸುವುದು ಮುಖ್ಯವೆನಿಸುತ್ತದೆ’ ಎಂದು ಐಸಿಸಿ ಅಂಕಣದಲ್ಲಿ ರೈನಾ ಬರೆದಿದ್ದಾರೆ. ಏತನ್ಮಧ್ಯೆ ‘ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಐಪಿಎಲ್‌ನಲ್ಲಿ ಆಡಿರುವುದು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ’ ಎಂದು ಹೇಳಿದ್ದಾರೆ. ‘ಯುಎಇ ಪರಿಸ್ಥಿತಿ ಭಾರತ ಹಾಗೂ ಪಾಕಿಸ್ತಾನಕ್ಕೆ ಸಮಾನವಾಗಿದೆ. ಹಾಗಾಗಿ ಏಷ್ಯಾದ ತಂಡಗಳಿಗೆ ಅವಕಾಶ ಹೆಚ್ಚಿದ್ದು, ತಮ್ಮ ಸಹಜ ಆಟವನ್ನು ಆಡಲು ಸಾಧ್ಯವಾಗಲಿದೆ’ ಎಂದರು.
ವಿರಾಟ್ ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ನಿರ್ವಹಣೆಯು ಟೂರ್ನಿಯಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಹಾಗೂ ಭುವನೇಶ್ವರ್ ಕುಮಾರ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.