Saturday, December 14, 2024
Homeಕರಾವಳಿ ಕರ್ನಾಟಕಉಡುಪಿವಿವಾದಕ್ಕೆ ಈಡಾದ ಕೇಸರಿ ದಿರಿಸಿನ ಪೊಲೀಸರು

ವಿವಾದಕ್ಕೆ ಈಡಾದ ಕೇಸರಿ ದಿರಿಸಿನ ಪೊಲೀಸರು

ಉಡುಪಿ: ಜಿಲ್ಲೆಯ ಕಾಪು ಪೊಲೀಸ್‌ ಠಾಣೆಗಳಲ್ಲಿ ಪೊಲೀಸರು ಕೇಸರಿ ದಿರಿಸು ಧರಿಸಿ ಆಯುಧ ಪೂಜೆ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖಾಕಿ ಪಡೆಯ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಾಪು ಪೊಲೀಸ್‌ ಠಾಣೆಯಲ್ಲಿನ ಆಯುಧ ಪೂಜೆ ವೇಳೆ ಅಲ್ಲಿನ ಪುರುಷ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಸರಿ ಅಂಗಿ ಹಾಗೂ ಬಿಳಿ ಪಂಚೆ ಧರಿಸಿದ್ದರು. ಮಹಿಳಾ ಸಿಬ್ಬಂದಿಯಲ್ಲಿ ಹಲವರು ಕೇಸರಿ ಸೀರೆ ಧರಿಸಿದ್ದರು. ಈ ಘಟನೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದಿರುವ ಉಡುಪಿ ಎಸ್‌ಪಿ ಎನ್‌. ವಿಷ್ಣುವರ್ಧನ್‌, ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.

ಭಾರಿ ವಿರೋಧ: ಕಾಪು ಪೊಲೀಸ್‌ ಠಾಣೆಯಂತೆಯೇ ವಿಜಯಪುರ ಠಾಣೆಯಲ್ಲೂ ಈ ರೀತಿಯ ದಿರಿಸು ಧರಿಸಿದ್ದಾರೆ. ಎರಡೂ ಪೊಲೀಸ್‌ ಠಾಣೆಗಳಲ್ಲಿ ನಡೆದ ಆಯುಧ ಪೂಜೆಯ ಫೋಟೊಗಳು ಭಾನುವಾರ ಬೆಳಿಗ್ಗೆ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಪೊಲೀಸರು ಹಿಂದುತ್ವ ಪರ ಸಂಘಟನೆಗಳಂತೆ ವರ್ತಿಸಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಪೊಲೀಸರು ಕೇಸರಿ ವಸ್ತ್ರ ಧರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.