ಬೆಳಗಾವಿ: ‘ರಾಜ್ಯದಲ್ಲಿ ಪ್ರಸ್ತುತ ಲಕ್ಷ ಜನ ಏಡ್ಸ್ ಪೀಡಿತರಿದ್ದಾರೆ. ಅವರಲ್ಲಿ ಶೇ 70ರಷ್ಟು ಮಂದಿ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಲ್ಲಿ ಜಾಗೃತಿಯ ಕೊರತೆ ಇದೆ. ಇದನ್ನು ಹೋಗಲಾಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿ.ಪಂ., ಬಿಮ್ಸ್, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಕೆಎಲ್‌ಇ ಸಂಸ್ಥೆಯ ಜೀರಿಗೆ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘2010ರಲ್ಲಿ ಮಹಾರಾಷ್ಟ್ರ, ತಮಿಳುನಾಡು, ಚೈನ್ಯ, ಕೇರಳದಂತಹ ರಾಜ್ಯಗಳಲ್ಲಿ ಏಡ್ಸ್ ರೋಗಿಗಳ ಸಂಖ್ಯೆಯು ಹೆಚ್ಚಾಗಿ ಕಂಡು ಬಂದಿತ್ತು. ಇಂತಹ ರೋಗವನ್ನು ವಿರೋಧಿಸಬೇಕೆ ಹೊರತು, ರೋಗಿಗಳನ್ನಲ್ಲ. ಅವರಿಗೆ ಮನೋಸ್ಥೈರ್ಯ ತುಂಬಬೇಕು’ ಎಂದು ತಿಳಿಸಿದರು.
‘ನೆರೆಯ ರಾಜ್ಯದ ಜನರು ಬರುವುದರಿಂದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ, ‘ಎಚ್‌ಐವಿ–ಏಡ್ಸ್ ನಿಯಂತ್ರಣ ಹಾಗೂ ಜಾಗೃತಿಗೆ ಶ್ರಮಿಸುತ್ತಿರುವ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಅನುದಾನ ಒದಗಿಸಬೇಕು’ ಎಂದು ಕೋರಿದರು.
60ಕ್ಕೆ ಇಳಿಸಲು ಪ್ರಸ್ತಾವ:
‘ಬಿಮ್ಸ್‌ನಲ್ಲಿ ಪ್ರತಿ ವರ್ಷ 100 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಇದೆ. ಸಿಬ್ಬಂದಿ ಕೊರತೆಯ ಹಾಗೂ ಇನ್ನಿತರ ಕಾರಣಗಳಿಂದ ಅದನ್ನು 60 ಸೀಟುಗಳಿಗೆ ಇಳಿಸಲು ಪ್ರಸ್ತಾವವಿದೆ. ಕೊರತೆಗಳನ್ನು ನೀಗಿಸಿ 100 ವಿದ್ಯಾರ್ಥಿಗಳಿಗೆ ಅವಕಾಶ ಕೊಡಬೇಕು’ ಎಂದು ಕೋರಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಏಡ್ಸ್ ಜಾಗೃತಿ ಪ್ರಚಾರಸಾಮಗ್ರಿ ಹಾಗೂ ಭಿತ್ತಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕಿ ಡಾ.ಕೆ. ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಪಂ. ಸಿಇಒ ಎಚ್.ವಿ. ದರ್ಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಅಪ್ಪಾಸಾಹೇಬ ನರಟ್ಟಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಉಪಸ್ಥಿತರಿದ್ದರು.