ಕೇಪ್‌ಟೌನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ನೂತನ ತಳಿ ಬಿ.1.1.529, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಈ ವೈರಸ್‌ಗೆ ಜಗತ್ತು ಕಳವಳಗೊಂಡಿದೆ.
ಈ ತಳಿಯಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಲಿದೆ.
ದಕ್ಷಿಣ ಆಫ್ರಿಕಾ, ಬೊಸ್ಟ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೆತೊ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಬಿ.1.1.529 ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.
ಈ ತಳಿಯ ಜಿನೋಮ್ ಸೀಕ್ವೆನ್ಸ್ ಅಧ್ಯಯನವನ್ನು ಸಿಂಗಾಪುರ ನಡೆಸಿತ್ತು. ಮೂಲ ಕೊರೊನಾವೈರಸ್ ಮತ್ತು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವಿರುವ ಡೆಲ್ಟಾ ರೂಪಾಂತರ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಬಿ.1.1.529ಗೆ ಇದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.
‘ದಕ್ಷಿಣ ಅಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಾಣುವಿನ ನೂತನ ತಳಿ ಬಿ.1.1.529, ವಿರುದ್ಧ ಕೋವಿಡ್‌ನ ಲಸಿಕೆಗಳು ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಈ ತಳಿಯ ವೈರಾಣು ಈಗಾಗಲೇ ಆಫ್ರಿಕಾ ಖಂಡದಿಂದಾಚೆಗೆ ಹರಡಿರುವ ಅಪಾಯವಿದೆ. ಇದನ್ನು ನಿಯಂತ್ರಿಸದೇ ಇದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ’ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು ಹಾಂಗ್‌ಕಾಂಗ್‌ನಲ್ಲಿ ಈ ತಳಿಯ ವೈರಾಣು ತಗುಲಿರುವ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಆಫ್ರಿಕಾದ ಆರು ರಾಷ್ಟ್ರಗಳಿಂದ ವಿಮಾನ ಸಂಚಾರವನ್ನು ಹಲವು ದೇಶಗಳು ನಿಷೇಧಿಸಿವೆ. ಬ್ರಿಟನ್, ಜರ್ಮನಿ ಮತ್ತು ಇಟಲಿ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದವು. ನಂತರ ಮಲೇಷ್ಯಾ, ಸಿಂಗಪುರ, ಇಸ್ರೇಲ್ ಇದನ್ನೇ ಅನುಸರಿಸಿದವು. ಆನಂತರ ಐರೋಪ್ಯ ಒಕ್ಕೂಟವೂ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.