ಚಿಕ್ಕಮಗಳೂರು: ದಂತವೈದ್ಯರೊಬ್ಬರು ತನ್ನ ವೃತ್ತಿಯನ್ನೇ ಬದಿಕಿಟ್ಟು ಶೂನ್ಯ ಬಂಡವಾಳದ ಕೃಷಿಗೆ ಇಳಿದು ಯಶಸ್ವಿ ಆಗಿದ್ದಾರೆ. ಅರೆ ಮಲೆನಾಡಿನಲ್ಲಿಯೂ ಶೂನ್ಯ ಬಂಡವಾಳ ಪದ್ಧತಿಯಲ್ಲಿ ಕೃಷಿ ಲಾಭದಾಯಕವಾಗುವಂತೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ದಂತ ವೈದ್ಯ ಡಾ.ವಿವೇಕ್ ಬೆಳಗೋಡು.
ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಪ್ರದೇಶ ಸಂಪೂರ್ಣ ಅರೆ ಮಲೆನಾಡು ಪ್ರದೇಶ. ವಾರ್ಷಿಕ 16 ರಿಂದ 20 ಇಂಚು ಮಳೆಯಾಗುತ್ತದೆ. ಇಂತಹ ಜಾಗದಲ್ಲಿ 85 ಎಕರೆ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳನ್ನು ವ್ಯವಸ್ಥಿತವಾಗಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.
2004ರಲ್ಲಿ ಎಮ್ಮೆದೊಡ್ಡಿಯಲ್ಲಿ 85 ಎಕರೆ ಜಮೀನು ಖರೀದಿಸಿ ತೋಟಗಾರಿಕಾ ಬೆಳೆಯತ್ತ ಗಮನ ಹರಿಸಿದರು. ಅಡಿಕೆ, ತೆಂಗು ಪ್ರಧಾನವಾಗಿ ಬೆಳೆಯಲು ಉದ್ದೇಶಿಸಿ ಕಾರ್ಯಪ್ರವೃತ್ತರಾದರು. ಸಂಪೂರ್ಣ ಜಮೀನಿನಲ್ಲಿ ತೆಂಗು ಮತ್ತು ಅಡಿಕೆ ಮತ್ತು ನಿಗದಿತ ಅಂತರದಲ್ಲಿ ಹೆಬ್ಬೇವು ಹಾಕಿದರು.
ಅಡಿಕೆ ಫಸಲು ಬಿಡಲಾರಂಭಿಸಿದ ನಂತರ ಕಾಳುಮೆಣಸು ಬಳ್ಳಿ ನಾಟಿ ಮಾಡಿ ಅಡಿಕೆ ಮತ್ತು ಹೆಬ್ಬೇವು ಗಿಡಗಳಿಗೆ ಹಬ್ಬಿಸಿದರು. ಇಡೀ ಜಮೀನಿನಲ್ಲಿ ಕಾಳು ಮೆಣಸು ಬಳ್ಳಿಗಳು ಇಂದು ನಳನಳಿಸುತ್ತಿವೆ. ಕಾಳುಮೆಣಸು ಕೊಯ್ಲಾದ ನಂತರ ತಾವೇ ವೈಜ್ಞಾನಿಕವಾಗಿ ಸಂಸ್ಕರಿಸುತ್ತಾರೆ. ಕಾಳುಮೆಣಸು ಒಣಗಿಸುವುದು, ಗುಣಮಟ್ಟಕ್ಕೆ ತಕ್ಕಂತೆ ವಿಂಗಡಿಸುವುದು ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆಯಿದೆ.
ವಾರ್ಷಿಕ ಕನಿಷ್ಠ ಐದು ಟನ್ ಒಣ ಕಾಳುಮೆಣಸು ಇಳುವರಿ ಪಡೆಯುತ್ತಾರೆ. ಇವರ ತೋಟದಲ್ಲಿ ಬೆಳೆಯುವ ಕಾಳುಮೆಣಸು ಉತ್ತಮ ಗುಣಮಟ್ಟದ್ದಾಗಿದೆ. ಅಂತರರಾಷ್ಟ್ರೀಯ ಪೆಪ್ಪರ್ ಸಮುದಾಯ (IPC) ‘ಅತ್ಯುತ್ತಮ ಕೃಷಿಕ ಪ್ರಶಸ್ತಿ’ ನೀಡಿ ಗೌರವಿಸಿದೆ.
ಜೊತೆಗೆ ತೆಂಗು, ದಾಳಿಂಬೆ, ಸಪ್ಪೋಟ, ಪಪ್ಪಾಯ (ರೆಡ್ ಲೇಡಿ ಮತ್ತು ತೈವಾನ್ ತಳಿ), ಆಲ್ಫೋನ್ಸಾ ಮಾವು ಸಹ ಬೆಳೆದಿದ್ದಾರೆ. ಟಿಶ್ಯೂ ಕಲ್ಚರ್ (ಅಂಗಾಂಶ ಕೃಷಿ) ಬಾಳೆ ಮತ್ತು ಸುಗಂಧ ದ್ರವ್ಯಕ್ಕೆ ಉಪಯೋಗಿಸುವ ಪಚೋಲಿ ಬೆಳೆ ಬೆಳೆದಿರುವುದು ವಿಶೇಷ.
ಮೆಣಸು ಬೆಳೆಗೆ ಹರಿಯುವ ನೀರು ಸೂಕ್ತವಲ್ಲ. ಹಾಗಾಗಿ, ಇಡೀ ತೋಟಕ್ಕೆ ನೀರುಣಿಸಲು ಕೊಳವೆಬಾವಿಯಿಂದ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಪ್ರತಿನಿತ್ಯ ಅಡಿಕೆ, ತೆಂಗು, ಕಾಳುಮೆಣಸು ಗಿಡಗಳಿಗೆ ತಲಾ 32 ಲೀಟರ್ ನೀರು ದೊರೆಯುವಂತೆ ಸಂಯೋಜಿಸಿದ್ದಾರೆ.
ಹಣ್ಣಿನ ಬೆಳೆಗಳಿಗೆ ಸ್ಥಳೀಯವಾಗಿ ಮತ್ತು ಬೆಂಗಳೂರು ಮುಂತಾದ ಕಡೆ ಬೇಡಿಕೆಯಿದೆ. ಮಾರುಕಟ್ಟೆಯ ತೊಂದರೆ ಹೆಚ್ಚು ಇಲ್ಲ. ಪ್ರತಿ ಗಿಡಗಳಿಗೆ ನಿಗದಿತ ಪ್ರಮಾಣದಲ್ಲಿ ರಸಗೊಬ್ಬರ ನೀಡುತ್ತಾರೆ. ಕಾಲಕಾಲಕ್ಕೆ ಔಷಧಿ ಸಿಂಪಡಣೆ ಮಾಡುತ್ತಾರೆ. ತಾವೇ ಕೆಲಸ ನಿರ್ವಹಿಸುವ ವಿವೇಕ್ ಅಗತ್ಯ ಕಂಡಾಗ ಆಳುಗಳ ಸಹಾಯ ಪಡೆಯುತ್ತಾರೆ. ತೋಟಗಾರಿಕಾ ಇಲಾಖೆ ಮತ್ತು ಸಾಂಬಾರ ಮಂಡಳಿಯ ಮಾರ್ಗದರ್ಶನವನ್ನೂ ಪಡೆಯುತ್ತಾರೆ.
‘ಕೃಷಿಗೆ ಮೊದಲು ಬೇಕಿರುವುದು ಬದ್ಧತೆ. ಯಾರು ಏನು ಮಾಡಿದ್ದಾರೆ ಎಂದು ನೋಡುವುದಕ್ಕಿಂತ ನಾನು ಏನು ಮಾಡಿದ್ದೇನೆ, ಏನು ತಪ್ಪು ಮಾಡಿದ್ದೇನೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಿದರೆ ಕೃಷಿಯಲ್ಲಿ ನೆಮ್ಮದಿ ಕಾಣಬಹುದು. ಬದ್ಧತೆಯಿಲ್ಲದಿದ್ದರೆ ಕೃಷಿ ಕೆಲಸಕ್ಕೆ ಹೋಗದಿರುವುದು ಲೇಸು’ ಎನ್ನುತ್ತಾರೆ ವಿವೇಕ್.
‘ಆರಂಭದಲ್ಲಿ ವಿವೇಕ್ ದಂತ ವೈದ್ಯ ವೃತ್ತಿಯ ಜೊತೆ ಕೃಷಿಯನ್ನೂ ಮಾಡುತ್ತಿದ್ದರು. ನಂತರದಲ್ಲಿ ತಮ್ಮ ಬಳಿ ಚಿಕಿತ್ಸೆ ಪಡೆಯಲು ಬರುತ್ತಿರುವವರಿಗೆ ಪೂರ್ಣ ಪ್ರಮಾಣದ ಸಮಯ ನೀಡಲಾಗುತ್ತಿಲ್ಲ ಎನಿಸತೊಡಗಿದಾಗ ವೈದ್ಯ ವೃತ್ತಿಯನ್ನು ಪಕ್ಕಕ್ಕಿರಿಸಿ ಸಂಪೂರ್ಣ ಕೃಷಿಯಲ್ಲೆ ತೊಡಗಿಸಿಕೊಂಡರು. ಹಾಗೆಂದು ವೈದ್ಯ ವೃತ್ತಿಯನ್ನು ಕಡೆಗಣಿಸಿಲ್ಲ. ಅಗತ್ಯ ಕಂಡಾಗ ಅದರತ್ತಲೂ ಗಮನ ಹರಿಸುವ ವಿವೇಕ್ ಅವರಿಗೆ ಅವರ ತಂದೆ ಶ್ರೀಕಂಠ ಅವರ ಮಾರ್ಗದರ್ಶನವಿದೆ. ಜೊತೆಯಲ್ಲಿ ಕುಟುಂಬದ ಸಹಕಾರವೂ ಇದೆ.