ಗೋಕರ್ಣ: ಇಲ್ಲಿಯ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ವನಶ್ರೀ ವೈನ್ ಶಾಪ್‌ಗೆ ಶನಿವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ವೈನ್ ಭಸ್ಮವಾಗಿದೆ.
ಬೆಂಕಿ ಬೀಳಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಶನಿವಾರ ಬೆಳಿಗ್ಗೆ ಸುಮಾರು ರೂ 20 ಲಕ್ಷಕ್ಕೂ ಹೆಚ್ಚು ಮೊತ್ತದ ಮದ್ಯ ಸರಬರಾಜು ಆಗಿತ್ತು. ಕೆಲವು ದಿನಗಳ ಹಿಂದೆ ಪೂರೈಕೆಯಾಗಿದ್ದ ಮದ್ಯವೂ ಸ್ವಲ್ಪ ದಾಸ್ತಾನು ಇತ್ತು ಎನ್ನಲಾಗಿದೆ. ಒಟ್ಟು ರೂ 25 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬಸ್ ನಿಲ್ದಾಣದಲ್ಲಿದ್ದ ಪ್ರವಾಸಿಗರು ಬೆಂಕಿ ಉರಿಯುತ್ತಿರುವುದನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಕುಮಟಾದಿಂದ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.