Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆವ್ಯಾಯಾಮದಿಂದ ಪ್ರಾಣಾಪಾಯವಿಲ್ಲ: ಡಾ. ಮನೋಜ್ ಪೂಜಾರ್

ವ್ಯಾಯಾಮದಿಂದ ಪ್ರಾಣಾಪಾಯವಿಲ್ಲ: ಡಾ. ಮನೋಜ್ ಪೂಜಾರ್

ದಾವಣಗೆರೆ: ಹೃದಯಾಘಾತಕ್ಕೆ ವಿವಿಧ ಕಾರಣಗಳಿವೆ. ಆದರೆ ವ್ಯಾಯಾಮವನ್ನು ತಳುಕು ಹಾಕಲಾಗುತ್ತಿದೆ. ನಿಯಮಿತ ವ್ಯಾಯಾಮದಿಂದ ಯಾವುದೇ ಅಪಾಯವಿಲ್ಲ. ಬದಲಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌ನಂಥ ಕಾಯಿಲೆಗಳನ್ನು ದೂರವಿಡಬಹುದು ಎಂದು ತಜ್ಞ ವೈದ್ಯ ಡಾ.ಮನೋಜ್ ಪೂಜಾರ್ ಹೇಳಿದರು.

ದಾವಣಗೆರೆಯ ಪಿ.ಜೆ.ಬಡಾವಣೆಯ ಸ್ವೇಟ್ ಪಾರ್ಕ್ ಫಿಟ್‌ನೆಸ್‌ನಿಂದ ಜಿಮ್ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ‘ಹೃದಯ ಸಮಸ್ಯೆ’ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.

ಸರ್ಕಾರ ಶೀಘ್ರದಲ್ಲೇ ಜಿಮ್ ಬಗ್ಗೆ ನೂತನ ಮಾರ್ಗಸೂಚಿ ನೀಡಲಿದೆ. ಅದಕ್ಕೂ ಮುನ್ನ 35 ವರ್ಷ ದಾಟಿದವರಿಗೆ ಅವಶ್ಯಕತೆ ತಕ್ಕಷ್ಟು ವ್ಯಾಯಾಮ ಮಾಡಲು ಸಲಹೆ ನೀಡಬೇಕು ಎಂದು ತಿಳಿಸಿದರು.

ಬಿಪಿ, ಷುಗರ್ ಇರುವವರು, ವಂಶಪಾರಂಪರ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರು, ಕೊಲೆಸ್ಟ್ರಾಲ್ ಹೊಂದಿರುವವರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರಬೇಕು. 30 ವರ್ಷ ದಾಟಿದವರು ವರ್ಷಕ್ಕೆ ಒಮ್ಮೆ ತಪಾಸಣೆ ನಡೆಸಬೇಕು ಎಂದರು.

ಆಧುನಿಕ ಯುಗದ ಒತ್ತಡದ ಜೀವನದಿಂದ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಿದೆ. ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಆಧುನಿಕ ಜೀವನದಿಂದ ಹೊರಗಿರಬೇಕು. ಧೂಮಪಾನ, ಮದ್ಯಪಾನ ಮಾಡುವವರಿಗೂ ಹೃದಯಾಘಾತ ಹೆಚ್ಚು. ಮಾನಸಿಕವಾಗಿ, ದೈಹಿಕವಾಗಿ ಬಳಲಿರುವವರು ವ್ಯಾಯಾಮ ಮಾಡದೆ ಕನಿಷ್ಠ ಏಳು- ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಎ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪುನೀತ್ ರಾಜ್‍ಕುಮಾರ್ ನಿಧನರಾದ ನಂತರ ಬಹಳಷ್ಟು ಜನರಲ್ಲಿ ಜಿಮ್ ಮಾಡಿದರೆ ತೊಂದರೆ ಎಂಬ ಭಾವ ಬಂದಿದೆ. ಈ ಬಗ್ಗೆ ತಜ್ಞ ವೈದ್ಯರಿಂದಲೇ ಅಭಿಪ್ರಾಯ ಪಡೆಯಲು ಈ ಕಾರ್ಯಾಗಾರ ಏರ್ಪಡಿಸಲಾಯಿತು’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಸ್ವೇಟ್ ಫಿಟ್ನೆಸ್ ಪಾರ್ಕ್‌ನ ರೂಪಿತ್ ನಾಗರಾಜ್, ಅರುಣ್ ಮಾಸ್ಟರ್, ವಿಷು ಮಾಸ್ಟರ್ ಹಾಗೂ ತರಬೇತುದಾರರು ಉಪಸ್ಥಿತರಿದ್ದರು.