ಹಾವೇರಿ: ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಏಪ್ರಿಲ್ 19ರಂದು ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರ ಮೂಲದ ಮೂವರನ್ನು ಹಾವೇರಿ ಪೊಲೀಸ್ ವಿಶೇಷ ತಂಡ ಬಂಧಿಸಿದೆ.
ಅಕ್ರಮ ಕಂಟ್ರಿಮೇಡ್ ಪಿಸ್ತೂಲ್ ತಯಾರಿಕೆ ಮತ್ತು ಗುಂಡು ಪೂರೈಸಿದ ಆರೋಪದಡಿ ಬಿಹಾರ ರಾಜ್ಯದ ಮುಂಗೇರ್ ಜಿಲ್ಲೆಯ ಮಿರ್ಜಾಪುರ ಬರದಾ ಗ್ರಾಮದ ಮೊಹಮ್ಮದ್ ಆಸಿಫ್ ಅಲಂ, ಮೊಹಮ್ಮದ್ ಶಾಹಿದ್ ಚಾಂದ್ ಹಾಗೂ ಮೊಹಮ್ಮದ್ ಶಂಸದ್ ಅಲಂನನ್ನು ವಶಕ್ಕೆ ಪಡೆಯಲಾಗಿದೆ.
‘ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ @ ಮಲ್ಲಿಕ್ ಪಾಟೀಲನನ್ನು ಮೇ 19ರಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈತನ ಹೇಳಿಕೆಯ ಆಧಾರದ ಮೇಲೆ 8 ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ಬಿಹಾರದಲ್ಲಿ ಶೋಧ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಹಾವೇರಿಗೆ ಕರೆ ತರುತ್ತಿದೆ. ತನಿಖಾ ತಂಡದ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಜಿಪಿ ಪ್ರವೀಣ್ ಸೂದ್ ಅವರು ತಂಡಕ್ಕೆ ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ’ ಎಂದು ಎಎಸ್ಪಿ ವಿಜಯಕುಮಾರ ಸಂತೋಷ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.