Saturday, December 14, 2024
Homeಮೈಸೂರು ವಿಭಾಗಮೈಸೂರುಸಂಚಾರ ಠಾಣೆಯ ಎಎಸ್ಐ ಆತ್ಮಹತ್ಯೆ

ಸಂಚಾರ ಠಾಣೆಯ ಎಎಸ್ಐ ಆತ್ಮಹತ್ಯೆ

ಮೈಸೂರು: ಇಲ್ಲಿನ ವಿ.ವಿ.ಪುರಂ ಸಂಚಾರ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರಸ್ವಾಮಿ (54) ಭಾನುವಾರ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೌರಿಶಂಕರನಗರದ ತಮ್ಮ ನಿವಾಸದಲ್ಲಿ ಇವರು ಒಬ್ಬರೇ ವಾಸವಿದ್ದರು. ‘ಜೀವನ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಅವರು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಡ್ಲುಪೇಟೆ ತಾಲ್ಲೂಕಿನ ಸಾಗರೆ ಗ್ರಾಮದವರಾದ ಇವರು 1993ರಲ್ಲಿ ಕಾನ್‌ಸ್ಟೆಬಲ್‌ ಆಗಿ ನೇಮಕಗೊಂಡಿದ್ದರು. ನಂತರ, ಹಂತ ಹಂತವಾಗಿ ಬಡ್ತಿ ಪಡೆದಿದ್ದರು. ಮೆದು ಮಾತು ಹಾಗೂ ಕರ್ತವ್ಯ ಶ್ರದ್ಧೆಗೆ ಇವರು ಹೆಸರಾಗಿದ್ದರು. ನಗರದ ಮಂಡಿ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ಕಾರ್ಯನಿರ್ವಹಿಸಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದ್ದರು. ಜಗಳ, ಅಪಘಾತದಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಎರಡೂ ಕಡೆಯವರಿಗೆ ತಿಳಿವಳಿಕೆ ಹೇಳುತ್ತಿದ್ದರು. ಅಪಘಾತವಾದಾಗ ತಕ್ಷಣವೇ ಸ್ಥಳಕ್ಕೆ ದೌಡಾಯಿಸುತ್ತಿದ್ದರು. ಕೌಟುಂಬಿಕವಾಗಿಯೂ ಕಲಹ ಇರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್‌.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.