Saturday, December 14, 2024
Homeರಾಜ್ಯಮಲೆನಾಡು ಕರ್ನಾಟಕಸಕ್ರೆಬೈಲು: ಮರಿಯಾನೆಗೆ ಪುನೀತ್ ಹೆಸರು

ಸಕ್ರೆಬೈಲು: ಮರಿಯಾನೆಗೆ ಪುನೀತ್ ಹೆಸರು

ಶಿವಮೊಗ್ಗ: ಸಕ್ರೆಬೈಲಿನ ಬಿಡಾರದ ಎರಡು ವರ್ಷದ ಮರಿ ಗಜರಾಜನಿಗೆ ಬುಧವಾರ ಪುನೀತ್ ರಾಜ್‌ಕುಮಾರ್ ಹೆಸರಿಡುವ ಮೂಲಕ ವನ್ಯಜೀವಿ ವಿಭಾಗದ ಅಧಿಕಾರಿಗಳು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಗೌರವ ಸಲ್ಲಿಸಿದರು.

ಸಾಕ್ಷ್ಯ ಚಿತ್ರವೊಂದರ ನಿರ್ಮಾಣಕ್ಕಾಗಿ ಎರಡು ತಿಂಗಳ ಹಿಂದೆ ಪುನೀತ್ ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಆಗ ಅವರು ಮರಿಯಾನೆ ಹಿಡಿದುಕೊಂಡು ಮುದ್ದಾಡಿದ್ದರು. ಈಗ ಅದೇ ಮರಿಗೆ ಅವರ ಹೆಸರಿಡಲಾಗಿದೆ.

ಸಕ್ರೆಬೈಲು ಆನೆಬಿಡಾರದಲ್ಲಿ ತಾಯಿ ಆನೆ ನೇತ್ರಾಳಿಂದ ಮರಿಯಾನೆ ಬೇರ್ಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ ಮರಿ ಆನೆಗೆ ಪುನೀತ್‌ ಹೆಸರಿಟ್ಟು ಅಗಲಿದ ನಟನಿಗೆ ಗೌರವ ಸಲ್ಲಿಸಲಾಯಿತು. ಬಿಡಾರದಲ್ಲಿ ಇದೇ ಮೊದಲ ಬಾರಿ ಆನೆಯೊಂದಕ್ಕೆ ಚಿತ್ರನಟರ ಹೆಸರು ಇಡಲಾಗಿದೆ.

ನಟ ಪುನೀತ್ ರಾಜ್‌ಕುಮಾರ್ ವನ್ಯಜೀವಿಗಳು, ಕಾಡಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಅವರಿಗೆ ವನ್ಯಪ್ರಾಣಿಗಳ ರಕ್ಷಣೆಯ ಕನಸಿತ್ತು. ಬಿಡಾರಕ್ಕೆ ಭೇಟಿ ನೀಡಿದ್ದ ಅವರು ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರವೊಂದರಲ್ಲಿ ನಟಿಸಿದ್ದರು. ಹಾಗಾಗಿ, ಅವರ ಹೆಸರು ನಾಮಕರಣ ಮಾಡಿದ್ದೇವೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್ ಪ್ರತಿಕ್ರಿಯಿಸಿದರು.