Saturday, December 14, 2024
Homeರಾಜ್ಯಕರಾವಳಿ ಕರ್ನಾಟಕಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್. ಅಂಗಾರ ಸಚಿವ‌ ಸ್ಥಾನ ಉಳಿಸಿಕೊಂಡ 'ಸುಳ್ಯದ ಬಂಗಾರ'

ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್. ಅಂಗಾರ ಸಚಿವ‌ ಸ್ಥಾನ ಉಳಿಸಿಕೊಂಡ ‘ಸುಳ್ಯದ ಬಂಗಾರ’


ಮಂಗಳೂರು: ಸುಳ್ಯ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿರುವ ಎಸ್‌. ಅಂಗಾರ ಅವರು ಮತ್ತೊಮ್ಮೆ ‘ಮಂತ್ರಿ’ ಆಗಿರುವುದು ಬಿಜೆಪಿ ಪಾಳೆಯದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
27 ವರ್ಷಗಳಿಂದ ನಿರಂತರವಾಗಿ ಸುಳ್ಯದ ಶಾಸಕರಾಗಿರುವ ‘ಸುಳ್ಳಿ ಅಂಗಾರ’ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವ ಸ್ಥಾನ ಸಿಕ್ಕಿದೆ.
1994 ರಲ್ಲಿ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆದಾಗ ಸುಳ್ಯದ ಇತಿಹಾಸದಲ್ಲಿಯೇ ಮೊದಲ ಬಿಜೆಪಿ ಶಾಸಕರಾಗಿ ಆಯ್ಕೆಯಾದವರು ಎಸ್.ಅಂಗಾರ. ಅಲ್ಲಿಂದ ಇಲ್ಲಿ ತನಕ ಈ ಕ್ಷೇತ್ರದಿಂದ ಆಯ್ಕೆ ಆಗುತ್ತಲೇ ಇದ್ದಾರೆ.
ಸುಳ್ಯ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರೇ ಖುದ್ದಾಗಿ ಸುಳ್ಯ ಕ್ಷೇತ್ರಕ್ಕೆ ಬಂದು ಪ್ರಶಂಸಿಸಿದ್ದರು. ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ, ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದರಿಂದ ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ.
ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕರೂ ಏಳು ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ‌ ಮತ್ತೊಮ್ಮೆ ಬೊಮ್ಮಾಯಿ ಸಂಪುಟದಲ್ಲೂ ಅಂಗಾರ ಸಚಿವರಾಗಿದ್ದು, ಜಿಲ್ಲೆಯ ಕಾರ್ಯಕರ್ತರಲ್ಲಿ‌ ಸಂತಸ ಮನೆ ಮಾಡಿದೆ.
ಕೃಷಿ ಕೂಲಿ ಕಾರ್ಮಿಕ: ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮೊಗೇರ ಕುಟುಂಬದಲ್ಲಿ ಜನಿಸಿದ ಅಂಗಾರ ಅವರು ಕುಕ್ಕುಜಡ್ಕ ಶಾಲೆಯಲ್ಲಿ 8 ತರಗತಿ ಉತ್ತೀರ್ಣರಾಗಿದ್ದಾರೆ. ಮನೆಯಲ್ಲಿ ಪೋಷಕರು ಆರ್ಥಿಕ ಸಂಕಷ್ಟದಲ್ಲಿದ್ದಾಗ ಶಾಲೆಗೆ ಹೋಗುವ ಬದಲು ಕೃಷಿ ಕೂಲಿ ಕೆಲಸ ಮಾಡ ತೊಡಗಿದರು. ಇದೇ ವೇಳೆ ಆರ್‌ಎಸ್‌ಎಸ್ ಶಾಖೆಗೆ ಹೋಗಿ, ಸೇವಾ ಕಾರ್ಯಕರ್ತರಾಗಿ ನಂತರ ಬಿಜೆಪಿ ಕಾರ್ಯಕರ್ತರಾದವರು.
ಕಠಿಣ ಪರಿಶ್ರಮದ ನಿಷ್ಠಾವಂತ ಕಾರ್ಯಕರ್ತ ಎಂಬ ಗೌರವ ಪಡೆದುಕೊಂಡಿದ್ದ ಅಂಗಾರ ಅವರು. 1988 ರ ವಿಧಾನಸಭೆ ಚುನಾವಣೆಯಲ್ಲಿ ಮೀಸಲು ಕ್ಷೇತ್ರ ಸುಳ್ಯಕ್ಕೆ ಅಂಗಾರ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು. ಚುನಾವಣೆಯಲ್ಲಿ ಕಡಿಮೆ ಮತಗಳಿಂದ ಸೋಲು ಕಂಡಿದ್ದರು. ಬಳಿಕ ಪಕ್ಷದ ಸಕ್ರಿಯ
ಕಾರ್ಯಕರ್ತರಾಗಿ ಕೆಲಸ ಮುಂದುವರಿಸಿದರು. ನಂತರ 1994 ರ ಚುನಾವಣೆಯಲ್ಲಿ ಗೆದ್ದ ಅಂಗಾರ ಅವರು ಹಿಂತಿರುಗಿ ನೋಡಲೇ ಇಲ್ಲ.
1994ರಲ್ಲಿ ವಿಧಾನಸಭೆ ಪ್ರವೇಶಿಸಿದ ನಾಲ್ಕು ಮಂದಿ ಬಿಜೆಪಿ ಶಾಸಕರಲ್ಲಿ ಅಂಗಾರ, ಯಡಿಯೂರಪ್ಪ,
ಮತ್ತಿಬ್ಬರು ಇದ್ದರು. ಆಗಿನಿಂದ ಯಡಿಯೂರಪ್ಪ ಅವರಿಗೆ ಅಂಗಾರ ಅಚ್ಚುಮೆಚ್ಚು. ಸುಳ್ಯಕ್ಕೆ ಪ್ರಚಾರಕ್ಕೆ ಬಂದ ಎಲ್ಲ ರಾಷ್ಟ್ರೀಯ ನಾಯಕರು ಅಂಗಾರ ಅವರನ್ನು ‘ಸುಳ್ಯದ ಬಂಗಾರ’ ಎಂದೇ ವರ್ಣಿಸಿದ್ದರು.