Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಸಬ್ ರಿಜಿಸ್ಟ್ರಾರ್ ಹಾಗೂ ರೈತರ ಮಧ್ಯೆ ಕಚೇರಿಯಲ್ಲಿ ಜಟಾಪಟಿ

ಸಬ್ ರಿಜಿಸ್ಟ್ರಾರ್ ಹಾಗೂ ರೈತರ ಮಧ್ಯೆ ಕಚೇರಿಯಲ್ಲಿ ಜಟಾಪಟಿ

ದಾವಣಗೆರೆ ವಿಂಡ್ ಮಿಲ್ ಹಾಗೂ ಸೋಲಾರ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಾ ರೈತರು ಮತ್ತು ಜನಸಾಮಾನ್ಯರ ಆಸ್ತಿ ನೋಂದಣಿ ಮಾಡಲು ಸತಾಯಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಹೇಮೇಶ್ ಹಾಗೂ ರೈತರ ನಡುವೆ ಕೈಕೈ ಮಿಲಾಯಿಸಿದ ಘಟನೆ ಶುಕ್ರವಾರ ನಡೆದಿದೆ.

ಹೊರ ರಾಜ್ಯದ ವಿಂಡ್ ಮಿಲ್ ಹಾಗೂ ಸೋಲಾರ್ ಕಂಪನಿಗಳು ತಾಲ್ಲೂಕಿನ ರೈತರ ಜಮೀನುಗಳನ್ನು ಖರೀದಿಸುತ್ತಿದ್ದು, ಪ್ರತಿದಿನ ಹತ್ತಕ್ಕೂ ಹೆಚ್ಚು ಜಮೀನು ಖರೀದಿ ಪ್ರಕ್ರಿಯೆಗಳು ನಡೆಯುತ್ತಿವೆ. ಪಟ್ಟಣದ ಮಿನಿ ವಿಧಾಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕಂಪನಿಗಳ ದಲ್ಲಾಳಿಗಳೇ ತುಂಬಿಕೊಂಡಿದ್ದು ಸ್ಥಳೀಯ ರೈತರ ಪಾಲು ವಿಭಾಗ ಪತ್ರ, ದಾನ ಪತ್ರ ಹಾಗೂ ಇತರೆ ಪತ್ರಗಳ ನೋಂದಣಿಗಾಗಿ ವಾರಗಟ್ಟಲೆ ಅಲೆದಾಡಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಕಂಪನಿಗಳ ಪರವಾಗಿ ಅಧಿಕಾರಿಗಳು ಲಾಬಿ ನಡೆಸುತ್ತಾ ಬಡ ರೈತರನ್ನು ಅಮಾನವೀಯವಾಗಿ ಅಲೆದಾಡಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ನಿಮ್ಮ ಕಾರ್ಯವೈಖರಿ ಸರಿಇಲ್ಲ ಎಂದು ಪತ್ರ ಬರಹಗಾರ ಜಿ.ಎಚ್. ಹಜರತ್ ಆಲಿ ಹಾಗು ರಂಗಾಪುರದ ರೈತ ಬಾಬುರೆಡ್ಡಿ ಅವರು ಸಬ್ ರಿಜಿಸ್ಟ್ರಾರ್ ಹೇಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪೋದ್ರಿಕ್ತರಾದ ಸಬ್ ರಿಜಿಸ್ಟ್ರಾರ್ ತಮ್ಮ ಆಸನ ಬಿಟ್ಟು ಮೇಲೆದ್ದು ಜೋರುಧ್ವನಿಯಲ್ಲಿ ಚೀರಾಡಿದರು. ‘ ನಮಗೆ ಕಂಪನಿಯವರು ರೈತರು ಎಲ್ಲಾ ಒಂದೇ. ಕಂಒನಿಯವರು ಸಹ ಸರ್ಕಾರಕ್ಕೆ ಹೆಚ್ಚು ಶುಲ್ಕ ಪಾವತಿ ಮಾಡುತ್ತಾರೆ. ಅವರ ತಪ್ಪೇನು ಇದೆ’ ಎಂದು ಸಮಜಾಯಿಷಿ ನೀಡಿದರು. ಅಧಿಕಾರಿ ಹಾಗು ರೈತರು ತಾರಕ ಸ್ವರದಲ್ಲಿ ಜಗಳವಾಡುತ್ತಿದ್ದಂತೆ ಸಾರ್ವಜನಿಕರು ಗುಂಪಾಗಿ ಕಚೇರಿಯಲ್ಲಿ ಜಮಾಯಿಸಿದ್ದರು.

“ ಕಳೆದ 10 ದಿನಗಳಿಂದ ನಮ್ಮ ಕುಟುಂಬದ ಪಾಲುವಿಭಾಗ ಪತ್ರ ನೋಂದಣಿಗಾಗಿ ಸ್ಟಾಂಪ್ ಶುಲ್ಕ ಕಟ್ಟಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡುತ್ತಿದ್ದೇನೆ. ಆದರೆ ಅಧಿಕಾರಿ ಹೇಮೇಶ್ ಅವರು ಕಂಪನಿಗಳ ಪರ ಜಮೀನು ಖರೀದಿ ನೋಂದಣಿಗೆ ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ದಬಾಯಿಸುತ್ತಾರೆ ಎಂದು ರಂಗಾಪುರ ಗ್ರಾಮದ ರೈತ ಹಾಗೂ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬುರೆಡ್ಡಿ ಆರೋಪಿಸಿದರು.