Monday, May 19, 2025
Homeಸುದ್ದಿರಾಷ್ಟ್ರೀಯಸಮೀರ್ ವಿರುದ್ಧ ಎರಡೆರಡು ತನಿಖೆ

ಸಮೀರ್ ವಿರುದ್ಧ ಎರಡೆರಡು ತನಿಖೆ

ಮುಂಬೈ: ಮುಂಬೈ ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ಸೇವನೆ ಪ್ರಕರಣವನ್ನು ಬೇಧಿಸಿದ್ದ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಈಗ ಎರಡು ತನಿಖೆಗಳು ಆರಂಭವಾಗಿವೆ.

ಪ್ರಕರಣದಲ್ಲಿ ಬಂಧಿತನಾಗಿರುವ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್‌ ಅನ್ನು ಕೈಬಿಡಲು ಲಂಚ ಸ್ವೀಕರಿಸಿದ ಆರೋಪ ಸಂಬಂಧ ಎನ್‌ಸಿಬಿ ಕೇಂದರ ಕಚೇರಿ ಮತ್ತು ಮುಂಬೈ ಪೊಲೀಸರು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.

ಈ ಪ್ರಕರಣದಲ್ಲಿ ಮೊದಲ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್‌ ಅವರು, ಸಮೀರ್ ಲಂಚ ಕೇಳಿದ ಸಂಬಂಧ ಬರೆದಿದ್ದ ಪತ್ರವನ್ನು ಎನ್‌ಸಿಬಿ ನೈರುತ್ಯ ವಲಯ ಕಚೇರಿಯು ಸೋಮವಾರವೇ ದೆಹಲಿ ಕೇಂದ್ರ ಕಚೇರಿಗೆ ರವಾನಿಸಿತ್ತು. ಆ ಪತ್ರದ ಆಧಾರದ ಮೇಲೆ ಎನ್‌ಸಿಬಿ ಸಮೀರ್ ವಿರುದ್ಧ ತನಿಖೆ ಆರಂಬಿಸಿತ್ತು. ತನಿಖೆಯ ಭಾಗವಾಗಿ ಸಮೀರ್ ಮತ್ತು ಇನ್ನೂ ಇಬ್ಬರು ಅಧಿಕಾರಿಗಳನ್ನು ಎನ್‌ಸಿಬಿ ತನ್ನ ಕಚೇರಿಗೆ ಕರೆಸಿಕೊಂಡಿತ್ತು. ಈಗ ಎನ್‌ಸಿಬಿ ಕೇಂದ್ರ ಕಚೇರಿಯ ಮೂವರು ಅಧಿಕಾರಿಗಳು ಬುಧವಾರ ಮುಂಬೈಗೆ ಭೇಟಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವೆಡೆ ವಿಚಾರಣೆ ನಡೆಸಿದ್ದಾರೆ.

ಎನ್‌ಸಿಬಿಯ ಉಪ ಪ್ರಧಾನ ನಿರ್ದೇಶಕ ದ್ಯಾನೇಶ್ವರ್ ಸಿಂಗ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ತಂಡವು ಎನ್‌ಸಿಬಿ ಮುಖ್ಯಸ್ಥ ಎಸ್‌.ಎನ್.ಪ್ರಧಾನ್ ಅವರಿಗೆ ವರದಿ ಮಾಡಿಕೊಳ್ಳಲಿದೆ.

‘ನಾವು ಈಗಷ್ಟೇ ತನಿಖೆ ಆರಂಭಿಸಿದ್ದೇವೆ. ಇದು ಅತ್ಯಂತ ಸೂಕ್ಷ್ಮವಾದ ಪ್ರಕರಣ ಮತ್ತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ಮತ್ತು ವಿಚಾರಣೆ ನಡೆಸುತ್ತೇವೆ. ನಂತರ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ’ ಎಂದು ದ್ಯಾನೇಶ್ವರ್ ಸಿಂಗ್ ಹೇಳಿದ್ದಾರೆ.

ಮುಂಬೈ ಪೊಲೀಸರೂ ಸಮೀರ್ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಸಹಾಯಕ ಆಯುಕ್ತರ ಮಟ್ಟದ ಪೊಲೀಸ್ ಅಧಿಕಾರಿಯು ತನಿಖೆಯನ್ನು ಮುನ್ನಡೆಸಲಿದ್ದಾರೆ. ಆದರೆ ಯಾವ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಮುಂಬೈ ಪೊಲೀಸರು ಈಗಾಗಲೇ ಪ್ರಭಾಕರ್ ಸೈಲ್‌ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.