Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಸವದತ್ತಿ ಯಲ್ಲಮ್ಮ ದೇವಸ್ಥಾನ: ತಿಂಗಳಲ್ಲಿ ₹ 1.20 ಕೋಟಿ ಸಂಗ್ರಹ

ಸವದತ್ತಿ ಯಲ್ಲಮ್ಮ ದೇವಸ್ಥಾನ: ತಿಂಗಳಲ್ಲಿ ₹ 1.20 ಕೋಟಿ ಸಂಗ್ರಹ

ಉಗರಗೋಳ (ಬೆಳಗಾವಿ ): ಒಂದೂವರೆ ವರ್ಷದ ನಂತರ ಸಾರ್ವಜನಿಕ ದರ್ಶನಕ್ಕೆ ಮುಕ್ತವಾದ ನಂತರ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಅಂತೆಯೇ, ಅವರಿಂದ ಸಾಕಷ್ಟು ಕಾಣಿಕೆಯೂ ಸಂಗ್ರಹವಾಗುತ್ತಿದೆ.

ದೇವಸ್ಥಾನ ವ್ಯವಸ್ಥಾಪನ ಸಮಿತಿ, ಜಿಲ್ಲಾಧಿಕಾರಿ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಸವದತ್ತಿ ಠಾಣೆ ಪೊಲೀಸ್ ಅಧಿಕಾರಿ ಸಮ್ಮುಖದಲ್ಲಿ ಬುಧವಾರ ಮತ್ತು ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. ಅಕ್ಟೋಬರ್ ತಿಂಗಳೊಂದರಲ್ಲೇ ₹ 1.20 ಕೋಟಿ ಸಂಗ್ರಹವಾಗಿದೆ. ಇದೇ ಅವಧಿಯಲ್ಲಿ ಭಕ್ತರು ₹ 15 ಲಕ್ಷ ಮೌಲ್ಯದ ಚಿನ್ನ ಹಾಗೂ ₹ 2 ಲಕ್ಷ ಮೌಲ್ಯದ ಬೆಳ್ಳಿಯನ್ನು ಕಾಣಿಕೆಯಾಗಿ ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ ಎಂದು ಕಾರ್ಯನಿರ್ವಾಜಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದರು.

‘ಯಲ್ಲಮ್ಮನಗುಡ್ಡಕ್ಕೆ ಕರ್ನಾಟಕದೊಂದಿಗೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಈ ಹಿಂದೆ ವರ್ಷಕ್ಕೆ ಸರಾಸರಿ ₹ 4 ಕೋಟಿ (ದೇವಸ್ಥಾನದ ಹುಂಡಿಯಲ್ಲಿ) ಸಂಗ್ರಹವಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷ ದೇಗುಲದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಿದ್ದರಿಂದ ಯಾವುದೇ ಆದಾಯ ಬಂದಿರಲಿಲ್ಲ. ಇದೇ ಮೊದಲ ಸಲ ದಾಖಲೆ ಮೊತ್ತ ಸಂಗ್ರಹವಾಗಿದೆ ಎಂಬ ಮಾಹಿತಿ ದೊರೆತಿದೆ.

ಎಣಿಕೆ ಕಾರ್ಯದಲ್ಲಿ ದೇವಸ್ಥಾನದ 85 ಸಿಬ್ಬಂದಿ ಮತ್ತು ಸಿಂಡಿಕೇಟ್ ಬ್ಯಾಂಕ್‌ನ 10 ಸಿಬ್ಬಂದಿ ಪಾಲ್ಗೊಂಡಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಲಕ್ಷ್ಮಿ ಹೂಲಿ, ರಾಜೇಶ್ವರಿ ಚಂದರಗಿ, ಪುಂಡಲೀಕ ಮೇಟಿ, ವೈ.ವೈ. ಕಾಳಪ್ಪನವರ, ಇಒ ರವಿ ಕೋಟಾರಗಸ್ತಿ, ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರ್‌ ದಶರಥ ಜಾಧವ, ಪಿಎಸ್ಐ ಶಿವಾನಂದ ಗುಡಗನಟ್ಟಿ, ಎಂಜಿನಿಯರ್ ಎ.ವಿ. ಮುಳ್ಳೂರ, ಬಾಳೇಶ ಅಬ್ಬಾಯಿ, ನಾಗರತ್ನಾ ಚೋಳಿನ, ಅರವಿಂದ ಮಾಳಗೆ, ಅನ್ನಪೂರ್ಣಾ ತೆಲಗಿ, ಎಂ.ಎಸ್. ಯಲಿಗಾರ, ಡಿ.ಆರ್. ಚವ್ಹಾಣ ಇದ್ದರು.