ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ತಿಂಗಳ 30ರವರೆಗೆ ವಿಸ್ತರಿಸಿದೆ. ಶುಲ್ಕ ಪಾವತಿಸಲು ಡಿ. 6 ಕೊನೆಯ ದಿನ.
ಈ ಮೊದಲು ನ. 6ರ ಕೊನೆಯ ದಿನ ಎಂದು ನಿಗದಿಪಡಿಸಲಾಗಿತ್ತು. ಕೆ– ಸೆಟ್ (ಕರ್ನಾಟಕ ರಾಜ್ಯಮಟ್ಟದ ಅರ್ಹತಾ ಪರೀಕ್ಷೆ) ಫಲಿತಾಂಶ ನ. 2ರಂದು ಪ್ರಕಟವಾದ ಕಾರಣ ಕೊನೆಯ ದಿನವನ್ನು ನ. 20ರವರೆಗೆ ವಿಸ್ತರಿಸಲಾಗಿತ್ತು.
ಇದೀಗ ಕಂಪ್ಯೂಟರ್ ವಿಜ್ಞಾನ, ರಾಜ್ಯಶಾಸ್ತ್ರ, ರಸಾಯನ ವಿಜ್ಞಾನ, ಎಲೆಕ್ಟ್ರೋನಿಕ್ಸ್, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಭೌತವಿಜ್ಞಾನ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ತತ್ಸಮಾನ ವಿಷಯಗಳ ವಿದ್ಯಾರ್ಹತೆಯನ್ನು ನೀಡಿ ರಾಜ್ಯ ಸರ್ಕಾರ ನ. 18ರಂದು ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಕೊನೆಯ ದಿನವನ್ನು ಮತ್ತೆ ವಿಸ್ತರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.