Saturday, December 14, 2024
Homeರಾಜ್ಯಬೆಂಗಳೂರು ವಿಭಾಗಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಪರ ತೀರ್ಪು

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಪರ ತೀರ್ಪು

ಬೆಂಗಳೂರು: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಕರ್ನಾಟಕದವರೇ ಆಗಿರುವ ಚಂದ್ರಶೇಖರ ಕಂಬಾರರ ಮೇಲ್ಮನವಿ ಬಿದ್ದುಹೋಗಿದೆ.

ಕೃಷ್ಣಮೂರ್ತಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಕಾಡೆಮಿ ಹಣವನ್ನು ವೆಚ್ಚ ಮಾಡಿದ್ದರು ಎಂದು ಆಗಿನ ಕೆಲವರು ಆರೋಪ ಮಾಡಿದ್ದರು. 30 ಲಕ್ಷ ರೂಪಾಯಿ ನಷ್ಟ ಪಡೆಯಬೇಕು ಎಂದು ಅಕಾಡೆಮಿಯ ಶಿಸ್ತು ಸಮಿತಿ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯಕ್ಕೆ ಹೋಗಿದ್ದರು. ಏಕಸದಸ್ಯ ನ್ಯಾಯಪೀಠವು ಈ ಆದೇಶವನ್ನು ರದ್ದುಪಡಿಸಿ ತೀರ್ಪಿತ್ತಿತ್ತು. ಅದರ ವಿರುದ್ಧ ಮತ್ತೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ರಾಜ್ಯ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವೂ ಏಕಸದಸ್ಯ ನ್ಯಾಯಪೀಠದ ಆದೇಶವನ್ನೇ ಎತ್ತಿಹಿಡಿದಿದೆ.

ಈ ಮೂಲಕ ಇಂದಿನ ಆದೇಶ 67ರ ಪ್ರಾಯದ ಅಗ್ರಹಾರ ಕೃಷ್ಣಮೂರ್ತಿಯವರು ತಮ್ಮ ಕಾನೂನು ಸಮರದಲ್ಲಿ ಜಯ ಸಾಧಿಸಿ ನಿರಮ್ಮಳರಾಗುವಂತೆ ಮಾಡಿದೆ.

ಈ ಮೊದಲು ಶಿಸ್ತು ಸಮಿತಿ ಅದೇಶ ಪ್ರಶ್ನಿಸಿ ಅಗ್ರಹಾರ ಕೃಷ್ಣಮೂರ್ತಿವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರರು ಇದೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್‌.ಸುಜಾತ ಹಾಗೂ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ವಿಭಾಗೀಯ ನ್ಯಾಯಪೀಠವು, ಬುಧವಾರ ಪ್ರಕಟಿಸಿತು. ಕಂಬಾರರ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು.

ಏಕಸದಸ್ಯ ನ್ಯಾಯಪೀಠ ಏನು ಹೇಳಿ‌ತ್ತು?: ‘ಸಮಿತಿ, ತನ್ನ ಆದೇಶ ನೀಡುವ ಮುನ್ನ ನಡೆಸಿರುವ ವಿಚಾರಣಾ ಪ್ರಕ್ರಿಯೆ ಸರಿಯಿಲ್ಲ ಮತ್ತು ಬೈ–ಲಾ ಪ್ರಕಾರ, ನಿವೃತ್ತಿ ಹೊಂದಿದವರ ಮೇಲೆ ಈ ರೀತಿಯ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ’ ಎಂದು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.

ಕೃಷ್ಣಮೂರ್ತಿಯವರ ವಿರುದ್ಧದ ಆರೋಪವೇನು?: ‘ಕೃಷ್ಣಮೂರ್ತಿ ಅವರು ಅಕಾಡೆಮಿ ಕಾರ್ಯಕ್ರಮಗಳಿಗೆ ನಿಗದಿಗಿಂತಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದ್ದು ಮೇಲಿಂದ ಮೇಲೆ ಬೆಂಗಳೂರಿಗೆ ಅಧಿಕೃತ ಪ್ರವಾಸ ಕೈಗೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಲಾಗಿತ್ತು. ಈ ಕುರಿತಂತೆ ಶಿಸ್ತು ಸಮಿತಿ 2014ರ ಜೂನ್ 3ರಂದು ನಷ್ಟ ಭರ್ತಿ ಪಾವತಿಗೆ ಆದೇಶಿಸಿತ್ತು.