ಹುಬ್ಬಳ್ಳಿ: ಗದಗ, ಹಾವೇರಿ, ಸಿಂದಗಿ ಸೇರಿದಂತೆ ಕೆಲವೆಡೆ ಭಾನುವಾರ ಗುಡುಗು ಸಹಿತ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಸಿಡಿಲಿಗೆ ತಂದೆ, ಮಗ ಸೇರಿದಂತೆ ಮೂವರು ಕುರಿಗಾಹಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರಲಹಳ್ಳಿ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೊನ್ನದ ಮಲ್ಲೇಶ್ (33) ಅವರ ಮಗ ಸೊನ್ನದ ಮೈಲಾರಿ(10) ಮತ್ತು ಉಪ್ಪಾರ ಹನುಮಂತಪ್ಪ(38) ಮೃತರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ, ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಹಿರೇಕೆರೂರಿನಲ್ಲಿಯೂ ಉತ್ತಮ ಮಳೆಯಾಗಿದೆ.
ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಒಂದು ತಾಸಿಗೂ ಹೆಚ್ಚು ಭಾರಿ ಮಳೆ ಸುರಿಯಿತು. ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು. ಹಾವೇರಿ ನಗರದ ಹಾನಗಲ್ ರಸ್ತೆ ಮತ್ತು ಹಳೇ ಪಿ.ಬಿ.ರಸ್ತೆಯಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಜನರು ರಸ್ತೆಯನ್ನು ದಾಟಲು ಸಾಧ್ಯವಾಗದಷ್ಟು ನೀರು ವೇಗವಾಗಿ ಹರಿಯಿತು. ರಾಜಕಾಲುವೆ ಭರ್ತಿಯಾಗಿ ಹಳೇ ಪಿ.ಬಿ.ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಜನಸಂಚಾರ ಅಸ್ತವ್ಯಸ್ತಗೊಂಡಿತು.