ಚಿತ್ರದುರ್ಗ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಲೇ ಇದೆ. ಆದರೆ, ಇದು ಎಂದಿಗೂ ಈಡೇರುವುದಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
‘ರಾಜ್ಯದಲ್ಲಿ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಅಸೂಹೆ, ಮುಂಬರುವ ಚುನಾವಣೆಗಳಲ್ಲಿ ಸೋಲಿನ ಭೀತಿಯಿಂದಾಗಿ ಆ ಪಕ್ಷದ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದಲಿತ ಸಮುದಾಯದವರು ಬಿಜೆಪಿಯ ಷಡ್ಯಂತರ ಅರಿಯದಷ್ಟು ದಡ್ಡರಲ್ಲ’ ಎಂದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಂತಹ ದಿ. ದೇವರಾಜು ಅರಸು ನಂತರ ದಲಿತ, ಅಲ್ಪಸಂಖ್ಯಾತ, ಶೋಷಿತ, ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಕೊಡುಗೆ ನೀಡಿದ ಮುಖ್ಯಮಂತ್ರಿ ಯಾರಾದರು ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಆದರೆ, ಈ ಸಮುದಾಯದವರು ಸ್ವ–ಹಿತಾಸಕ್ತಿಗಾಗಿ ಬಿಜೆಪಿಯ ಜನವಿರೋಧಿ ನಡೆ ಕಂಡರೂ ಪಕ್ಷದಲ್ಲಿ
ಮೌನವಹಿಸಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯ’ ಎಂದು ಹೇಳಿದರು.
‘ದೇಶ ಮತ್ತು ರಾಜ್ಯದಲ್ಲಿ ಜಾತಿ-ಜಾತಿಗಳ, ಧರ್ಮ-ಧರ್ಮಗಳ ನಡುವೆ ಕಂದಕ, ದ್ವೇಷ ಭಾವನೆಯನ್ನು ಬಿಜೆಪಿ ಬಿತ್ತುತ್ತಿದೆ. ಅಲ್ಲದೆ, ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಇಷ್ಟಾದರೂ ಬಿಜೆಪಿಯಲ್ಲಿ ಇರುವ ಅಹಿಂದ ವರ್ಗದ ಜನ ಬಾಯಿ ಬಿಡುತ್ತಿಲ್ಲ’ ಎಂದು ಅಸಮಧಾನ
ವ್ಯಕ್ತಪಡಿಸಿದರು.
ಸಂವಿಧಾನ ಬದಲಿಸುವ, ಸದಾಶಿವ ಆಯೋಗ ವರದಿ ಜಾರಿಗೆ ಬಿಡುವುದಿಲ್ಲ ಎಂಬ ಮಾತುಗಳು ಬಿಜೆಪಿ ಸಚಿವರಿಂದ ಕೇಳಿ ಬರುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನೀಡುತ್ತಿದ್ದ ₹ 5 ಲಕ್ಷ ಸಬ್ಸಿಡಿ ₹ 1 ಲಕ್ಷಕ್ಕೆ ಇಳಿಸಲಾಗಿದೆ. ವಿದ್ಯಾರ್ಥಿ ವೇತನ, ವಸತಿ ನಿಲಯಗಳ ಸೌಲಭ್ಯ ಕೂಡ ಸದ್ದಿಲ್ಲದೆ ನಿಧಾನವಾಗಿ ಕಡಿತ ಮಾಡಲಾಗುತ್ತಿದೆ ಎಂದು ದೂರಿದರು.
ಬೆಲೆ ಏರಿಕೆ, ಜನಪರ ಯೋಜನೆಗಳಿಗೆ ಕಡಿವಾಣ, ಜನವಿರೋಧಿ ನೀತಿಗಳ ಜಾರಿಯಿಂದ ಬೇಸತ್ತಿರುವ ಜನ ಬಿಜೆಪಿಯನ್ನು ಶಪಿಸುತ್ತಿದ್ದಾರೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ತಂತ್ರಗಾರಿಕೆ ಮಾಡುತ್ತಿದೆ. ಇದು ಫಲಿಸುವುದಿಲ್ಲ. ಈಗಾಗಲೇ ಹಾನಗಲ್ ಉಪಚುನಾವಣೆಯಲ್ಲಿ ಜನ ಉತ್ತರ ನೀಡಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನರು ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.