ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಕಲಾಪಗಳನ್ನು ಇದೇ ಮೊದಲ ಬಾರಿಗೆ ವೆಬ್‌ಕಾಸ್ಟ್ ಮೂಲಕ ನೇರಪ್ರಸಾರ ಮಾಡಲಾಗುವುದು’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಪೂರ್ವಭಾವಿ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಅಧಿವೇಶನದಲ್ಲಿ ಜನಪ್ರತಿನಿಧಿಗಳು ಏನು ಚರ್ಚಿಸುತ್ತಾರೆ ಎನ್ನುವುದನ್ನು ಸಾರ್ವಜನಿಕರು ಕೂಡ ವೀಕ್ಷಿಸಲೆಂದು ನೇರಪ್ರಸಾರಕ್ಕೆ ನಿರ್ಧರಿಸಲಾಗಿದೆ. ಎಲ್ಲ ತಯಾರಿಯನ್ನೂ ನ.20ರೊಳಗೆ ಪೂರ್ಣಗೊಳಿಸುವಂತೆ ಇ-ಗವರ್ನನ್ಸ್, ಲೋಕೋಪಯೋಗಿ ಹಾಗೂ ವಾರ್ತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.
‘ಅಧಿವೇಶನವನ್ನು ಯಾವುದೇ ವಿಘ್ನ ಅಥವಾ ತೊಂದರೆಗಳಿಲ್ಲದಂತೆ ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.
‘ಪ್ರತಿ ಬಾರಿ ಅಧಿವೇಶನ ನಡೆದಾಗಲೂ ವಾಸ್ತವ್ಯಕ್ಕೆಂದು ಕೋಟಿಗಟ್ಟಲೆ ವ್ಯಯಿಸುವುದನ್ನು ತಪ್ಪಿಸಲು, ಇಲ್ಲಿ ಶಾಸಕರ ಭವನ ನಿರ್ಮಿಸಬೇಕು ಎನ್ನುವುದು ಬಹುಜನರ ಬೇಡಿಕೆಯಾಗಿದೆ. ಇದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಸ್ವಂತ ಕಟ್ಟಡ ನಿರ್ಮಿಸುವುದರಿಂದ ಅಪಾರ ಪ್ರಮಾಣದ ಹಣ ಉಳಿಸಬಹುದು. ಪ್ರತಿ ವರ್ಷ ಅಧಿವೇಶನ ನಡೆಸುವುದರಿಂದ ಇಲ್ಲಿ ಶಾಸಕರ ಭವನ ನಿರ್ಮಿಸುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ’ ಎಂದರು.
‘ಅಧಿವೇಶನ ವೇಳೆ, ಇಲ್ಲಿನ ಕಚೇರಿಗಳ ಕೆಲಸಗಳು ಸುಗಮವಾಗಿ ನಡೆಸಲು ಅನುಕೂಲ ಆಗುವಂತೆ ಜಿಲ್ಲಾಡಳಿತ ಕ್ರಮ ವಹಿಸುತ್ತದೆ. ಸುವರ್ಣ ವಿಧಾನಸೌಧವು ವಿಧಾನಸೌಧದ ರೀತಿಯಲ್ಲಿ ವರ್ಷಪೂರ್ತಿ ಚಟುವಟಿಕೆಯಿಂದ ಕೂಡಿರಬೇಕು. ಜನರು ಬಂದು ಹೋಗುವಂತಿರಬೇಕು. ಇದಕ್ಕಾಗಿ ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು’ ಎಂದು ಹೇಳಿದರು.
‘ಶಾಸಕರ ಹಾಜರಾತಿ ಕಡ್ಡಾಯಕ್ಕೆ ಅವಕಾಶ ಇಲ್ಲ. ಆದರೆ, ಬೆಳಗಾವಿ ಅಧಿವೇಶನದ ಕಲಾಪಗಳಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು’ ಎಂದರು.ವಿಧಾನಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದರು.