Saturday, December 14, 2024
Homeರಾಜ್ಯಉತ್ತರ ಕರ್ನಾಟಕಸಿರಿಗೆರೆ ಶ್ರೀಗಳ ಮೇಲೆ ಆರೋಪ ಮಾಡಿದವರಿಗೆ ದಿಟ್ಟ ಉತ್ತರ ನೀಡಲು ಭಕ್ತರ ನಿರ್ಧಾರ

ಸಿರಿಗೆರೆ ಶ್ರೀಗಳ ಮೇಲೆ ಆರೋಪ ಮಾಡಿದವರಿಗೆ ದಿಟ್ಟ ಉತ್ತರ ನೀಡಲು ಭಕ್ತರ ನಿರ್ಧಾರ

ದಾವಣಗೆರೆ: ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ವಿರುದ್ಧ ಆರೋಪ ಮಾಡಿದ ಐದು ಮಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಕ್ತರು, ಆರೋಪಗಳಿಗೆ ಉತ್ತರಿಸಲು ನಿರ್ಧರಿಸಿದ್ದಾರೆ.

ಸಮಾಜದ ಮುಖಂಡ ಅಣಬೇರು ರಾಜಣ್ಣ ನೇತೃತ್ವದಲ್ಲಿ ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದ ತರಳಬಾಳು ಸಭಾಭವನದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಇದೇ ಕಲ್ಯಾಣ ಮಂಟಪದಲ್ಲಿ ಆರೋಪ ಮಾಡಿದವರನ್ನು ಕರೆಸಿ ಮಠದ ಭಕ್ತರೇ ಉತ್ತರ ನೀಡೋಣ. ಶ್ರೀಗಳನ್ನು ಆಹ್ವಾನಿಸುವುದು ಬೇಡ ಎಂದು ಅಣಬೇರು ರಾಜಣ್ಣ ಹೇಳಿದರು.

ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿಯ ವಕೀಲ ಎಂ. ಸಿದ್ದಯ್ಯ, ಆನಗೋಡು ಗ್ರಾಮದ ಮುಖಂಡ ಎಚ್. ನಂಜುಂಡಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ. ವೀರಭದ್ರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಶಾಂತಗಂಗಾಧರ್, ಬೆಂಗಳೂರಿನ ಮಾದನಬಾವಿ ರುದ್ರಪ್ಪಗೌಡ ಅವರು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳ ವಿರುದ್ಧ ಆರೋಪ ಮಾಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ವರದಿಗಾರರ ಒಕ್ಕೂಟದ ಎದುರು ಕೆಲವರು ಸಮಿತಿ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಜೆ ನಡೆದ ತುರ್ತುಸಭೆಯಲ್ಲಿ ಈ ಐದು ಮಂದಿಯ ವಿರುದ್ಧ ಮಠದ ಭಕ್ತರು ಹರಿಹಾಯ್ದರು. ಐದು ಮಂದಿಯ ವಿರುದ್ಧ ಏಕಚನದಲ್ಲೇ ನಿಂದಿಸಿದರು.

ಆರಂಭದಲ್ಲಿ ಮಠದಲ್ಲಿ ಇದ್ದವರೇ ದ್ರೋಹ ಬಗೆದಿದ್ದಾರೆ. ಸಿದ್ದಯ್ಯ 8 ಜನ ಸಂಬಂಧಿಕರಿಗೆ ಹೇಗೆ ನೌಕರಿ ಕೊಡಿಸಿದರು. ವೀರಭದ್ರಪ್ಪ ಹೇಗೆ ಎಂಎಲ್‌ಸಿ ಆದರು. ಶಿವನಕೆರೆ ಬಸಲಿಂಗಪ್ಪ ಹೇಗೆ ಹಣ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಶ್ರೀಗಳ ಹಾಗೂ ಮಠದ ವಿರುದ್ಧ ಆರೋಪ ಮಾಡಿದವರಿಗೆ ತಕ್ಕ ಶಾಸ್ತಿ ಮಾಡೋಣ ಎಂದು ಕೆಲವು ಭಕ್ತರು ಗುಡುಗಿದರೆ, ಮತ್ತೆ ಕೆಲವರು ‘ಹಾಗೆ ಮಾಡಿದರೆ ಮಠಕ್ಕೆ ಹಾಗೂ ಶ್ರೀಗಳಿಗೆ ಕೆಟ್ಟ ಹೆಸರು ಬರುತ್ತದೆ. ಶಿಸ್ತು ಕಾಪಾಡಿಕೊಂಡು, ಆಯ್ದ 10 ಮಂದಿ ಅವರ ಆರೋಪಗಳಿಗೆ ಉತ್ತರಿಸೋಣ ಎಂದು ಸಲಹೆ ನೀಡಿದರು.

ಸಮಾಜದ ಮುಖಂಡ ಚಂದ್ರಣ್ಣ  ‘ಸಿರಿಗೆರೆ ಮಠ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಇತರೆ ಮಠಗಳ ಸ್ವಾಮೀಜಿ ಹಾಗೂ ಭಕ್ತರು ಸಿರಿಗೆರೆ ಮಠವನ್ನು ಮಾದರಿಯಾಗಿರಿಸಿಕೊಂಡಿದ್ದಾರೆ. ಸಂಯಮ ಕಾಪಾಡೋಣ‘ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ‘ಸಿರಿಗೆರೆ ಮಠದಲ್ಲಿ ಪಾರದರ್ಶಕತೆ ಇರುವುದರಿಂದಲೇ ಕೋಟ್ಯಂತರ ಹಣ ಬರುತ್ತಿದೆ. ಒಂದು ತಂಡದಿಂದ ಮಠದ ವಿರುದ್ಧ ಷಡ್ಯಂತ್ರ ನಡೆದಿದೆ. ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳೋಣ’ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಎಸ್‌.ಟಿ. ವೀರೇಶ್, ‘ಇದೊಂದು ವ್ಯವಸ್ಥಿತ ಷಡ್ಯಂತ್ರ. ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಡೋಣ. ನಮ್ಮ ತಾಳ್ಮೆ ದೌರ್ಬಲ್ಯವಲ್ಲ. ಆರೋಪ ಮಾಡಿದವರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜದ ಒಗ್ಗಟ್ಟು ಹೆಚ್ಚಾಗುತ್ತದೆ’ ಎಂದರು.

ಅಣಬೇರು ರಾಜಣ್ಣ ಮಾತನಾಡಿ, ‘ಮಠದ ಸಾಮಾನ್ಯ ಸಭೆಯಲ್ಲಿ ಶ್ರೀಗಳು ಲೆಕ್ಕ ಒಪ್ಪಿಸಿದ್ದಾರೆ. ಸಮಾಜದಲ್ಲಿ ಇರುವವರೇ ಲೆಕ್ಕ ಕೇಳಿರುವುದರಿಂದ ನಾವೇ ಲೆಕ್ಕ ಕೊಡೋಣ. ಶ್ರೀಗಳು ಹಣವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಅವರ ವಿರುದ್ಧವೇ ಆರೋಪ ಮಾಡಿರುವುದು ದೊಡ್ದ ದುರಂತ. ಅದಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಎಚ್ಚರಿಸಿದರು.

ಎಸ್‌.ಎಸ್‌.ಪಾಟೀಲರನ್ನು ಮಠದೊಳಕ್ಕೆ ಬಿಟ್ಟುಕೊಳ್ಳಬಾರದಿತ್ತು: ಹಿರೇಕೆರೂರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ ಅವರನ್ನು ಸಾಣೇಹಳ್ಳಿ ಶ್ರೀಗಳು ಮಠದೊಳಗೆ ಬಿಟ್ಟುಕೊಡಬಾರದಿತ್ತು ಎಂದು ಮುಖಂಡ ಅಣಬೇರು ರಾಜಣ್ಣ ಆಕ್ಷೇಪ ವ್ಯಕ್ತಪ‍ಡಿಸಿದರು.

ಸಾಣೇಹಳ್ಳಿಗೆ ಬಂದು ಆತ ಅವಮಾನ ಮಾಡಿದ್ದಾನೆ. ಆತನನ್ನು ಊರಿನ ಹೊರಗಡೆ ನಿಲ್ಲಿಸಬೇಕಿತ್ತು. ದೊಡ್ಡ ಸ್ವಾಮೀಜಿಗಳ (ಸಿರಿಗೆರೆ ಶ್ರೀಗಳು) ಅನುಮತಿ ಕೇಳಬೇಕಿತ್ತು’ ಎಂದು ಹೇಳಿದರು.

ಸಿದ್ದಯ್ಯ 35 ವರ್ಷಗಳಿಂದ ಮಠದಲ್ಲಿ ಲೆಕ್ಕ ಬರೆದುಕೊಂಡು ಇದ್ದವರು. ರಿಯಲ್ ಎಸ್ಟೇಟ್ ಮಾಡಬೇಡ ಎಂದು ಸ್ವಾಮೀಜಿಗಳು ಹೇಳಿದ್ದಕ್ಕೆ ಮಠದಿಂದ ಹೊರ ಬಂದಿದ್ದಾರೆ. ಪಂಡಿತರಾಧ್ಯ ಶ್ರೀಗಳು ಸಿದ್ದಯ್ಯ ಅವರನ್ನು ಸ್ವಾಮೀಜಿ ಮಾಡುತ್ತಾರಾ ಎಂದು ಪ್ರಶ್ನಿಸಿದರು.