Saturday, December 14, 2024
Homeಸುದ್ದಿರಾಷ್ಟ್ರೀಯಸೇನಾ ಹೆಲಿಕಾಪ್ಟರ್‌ ಪತನ: ಏರ್‌ಮಾರ್ಷಲ್‌ ನೇತೃತ್ವದಲ್ಲಿ ತನಿಖೆ

ಸೇನಾ ಹೆಲಿಕಾಪ್ಟರ್‌ ಪತನ: ಏರ್‌ಮಾರ್ಷಲ್‌ ನೇತೃತ್ವದಲ್ಲಿ ತನಿಖೆ

ಹೊಸದಿಲ್ಲಿ: ತಮಿಳುನಾಡಿನ ಕೂನೂರು ಸಮೀಪ ಸೇನಾ ಹೆಲಿಕಾಪ್ಟರ್‌ ಪತನಗೊಂಡು 13 ಮಂದಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದೆ. ಮೂರೂ ಸೇನೆಗಳ ಸದಸ್ಯರು ಇರುವ ತಂಡವು ಹೆಲಿಕಾಪ್ಟರ್‌ ದುರಂತದ ಬಗ್ಗೆ ತನಿಖೆ ನಡೆಸಲಿದೆ. ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆ ನೀಡಿದ್ದಾರೆ. 

ತನಿಖಾಧಿಕಾರಿಗಳ ತಂಡವು ವೆಲ್ಲಿಂಗ್ಟನ್‌ಗೆ ಬುಧವಾರವೇ ತಲುಪಿದೆ. ಅವರು ತನಿಖೆಯನ್ನೂ ಆರಂಭಿಸಿದ್ದಾರೆ ಎಂದು ರಾಜನಾಥ್‌ ಅವರು ತಿಳಿಸಿದ್ದಾರೆ. ಪತನಗೊಂಡ ಹೆಲಿಕಾಪ್ಟರ್‌ನ ಹಾರಾಟ ದತ್ತಾಂಶ ದಾಖಲಾಗಿರುವ ಬ್ಲ್ಯಾಕ್‌ ಬಾಕ್ಸ್‌ ಗುರುವಾರ ಸಿಕ್ಕಿದೆ. ಪತನಕ್ಕೆ ಸಂಬಂಧಿಸಿ ಮಹತ್ವದ ಸುಳಿವುಗಳು ಬ್ಲ್ಯಾಕ್‌ ಬಾಕ್ಸ್‌ನಿಂದ ಸಿಗುವ ಸಾಧ್ಯತೆ ಇದೆ. ಸೇನಾ ಪಡೆಗಳ ಮೊದಲ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ಇತರ 12 ಮಂದಿ ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟಿದ್ದರು. 

ಪತನದ ಸ್ಥಳದ 300 ಮೀಟರ್‌ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಶೋಧವನ್ನು ಅಧಿಕಾರಿಗಳು ಒಂದು ಕಿ. ಮೀ.ಗೆ ವಿಸ್ತರಿಸಿದ ಬಳಿಕ ಬ್ಲ್ಯಾಕ್‌ ಬಾಕ್ಸ್‌ ಸೇರಿ ಎರಡು ಪೆಟ್ಟಿಗೆಗಳು ಸಿಕ್ಕಿವೆ. ಈ ಪೆಟ್ಟಿಗೆಗಳನ್ನು ದೆಹಲಿ ಅಥವಾ ಬೆಂಗಳೂರಿಗೆ ಒಯ್ದು, ಅದರಲ್ಲಿರುವ ದತ್ತಾಂಶಗಳನ್ನು ಸಂಗ್ರಹಿಸಿ, ಹೆಲಿಕಾಪ್ಟರ್‌ ಪತನದ ಕಾರಣ ಕಂಡು ಹಿಡಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಸ್ಥಿತಿ ಗಂಭೀರವಾಗಿದೆ. ಅವರು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇದ್ದಾರೆ. ಪತನದ ಸ್ಥಳದಿಂದ ಆರು ಕಿ.ಮೀ. ದೂರದ ವೆಲ್ಲಿಂಗ್ಟನ್‌ನಲ್ಲಿ ಇರುವ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿ ಕಮಾಂಡ್‌ ಆಸ್ಪತ್ರೆಗೆ ಗುರುವಾರ ಸ್ಥಳಾಂತರಿಸಲಾಗಿದೆ.