Saturday, December 14, 2024
HomeUncategorizedಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಟಿ20 ಕ್ರಿಕೆಟ್‌ನಲ್ಲಿ 4 ಓವರ್‌ನಲ್ಲಿ ಒಂದೂ ರನ್ ಕೊಡದ ಬೌಲರ್...

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಟಿ20 ಕ್ರಿಕೆಟ್‌ನಲ್ಲಿ 4 ಓವರ್‌ನಲ್ಲಿ ಒಂದೂ ರನ್ ಕೊಡದ ಬೌಲರ್ ಅಕ್ಷಯ್

ಮಂಗಳಗಿರಿ: ಸೈ ಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿದರ್ಭ ತಂಡದ ಸ್ಪಿನ್ ಬೌಲರ್ ಅಕ್ಷಯ್ ಕರ್ನೇವಾರ್ ವಿನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮಣಿಪುರ ಎದುರು ನಡೆದ ಟಿ20 ಪಂದ್ಯದಲ್ಲಿ ಅವರು ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಒಂದೂ ರನ್ ನೀಡಿಲ್ಲ (4-4-0-2). ಅಂದರೆ ನಾಲ್ಕೂ ಓವರ್ ಮೇಡನ್ ಮಾಡಿದ್ದಲ್ಲದೆ 2 ವಿಕೆಟ್ ಗಳಿಸಿ ಈ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಟಿ20 ಅಥವಾ ಐಪಿಎಲ್ ಥರಹದ ಫ್ರಾಂಚೈಸಿಗಳು ನಡೆಸುವ ಲೀಗ್‌ಗಳಲ್ಲಿಯೂ ಸಹ ಯಾರೂ ಈ ಸಾಧನೆ ಮಾಡಿಲ್ಲ.

ಮೊದಲು ಬ್ಯಾಟ್ ಮಾಡಿದ ವಿದರ್ಭ 20 ಓವರ್‌ಗಳಲ್ಲಿ 222 ರನ್ ಗಳಿಸಿತು. ತಂಡದ ಜಿತೇಶ್ ಶರ್ಮಾ ಮತ್ತು ಅಪೂರ್ವ ವಾಖಂಡೆ ಕ್ರಮವಾಗಿ 71 ಮತ್ತು 49 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಮಣಿಪುರ 16.3 ಓವರ್‌ಗಳಲ್ಲಿ ಕೇವಲ 55 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ವಿದರ್ಭದ ಸ್ಪಿನ್ ಬೌಲರ್‌ಗಳಾದ ಅಕ್ಷಯ್ ಕರ್ನೇವಾರ್ ಮತ್ತು ಅಥರ್ವ ದಾಳಿಗೆ ಮಣಿಪುರದ ಬ್ಯಾಟ್ಸ್‌ಮನ್‌ಗಳು ನಿರುತ್ತರರಾದರು. ಹಾಗಾಗಿ ವಿದರ್ಭ 167 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.ಅಕ್ಷಯ್ ಕರ್ನೇವಾರ್ ಒಂದೂ ರನ್ ಸಹ ಬಿಟ್ಟು ಕೊಡದೆ ವಿಶ್ವ ದಾಖಲೆ ಬರೆದರು. ಇದಲ್ಲದೇ ಸಿಕ್ಕಿಂ ವಿರುದ್ಧ ನಡೆದ ಪಂದ್ಯದಲ್ಲಿಯೂ ಅಕ್ಷಯ್‌ ಕರ್ನೇವಾರ್‌ ಮಿಂಚಿದ್ದಾರೆ. 4 ಓವರ್‌ಗಳಲ್ಲಿ 5 ರನ್‌ ನೀಡಿ ನಾಲ್ಕು ವಿಕೆಟ್‌ ಕಿತ್ತಿದ್ದಾರೆ.ಒಂದು ದಿನ ಮೊದಲು ನಡೆದ ಪಂದ್ಯದಲ್ಲಿ ಮಧ್ಯ ಪ್ರದೇಶದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಬಿಹಾರದ ಎದರು ನಾಲ್ಕು ಓವರ್ ಬೌಲ್ ಮಾಡಿ ಕೇವಲ ಎರಡು ರನ್ ನೀಡಿ, ಎರಡು ವಿಕೆಟ್ ಕಬಳಿಸಿದ್ದರು (4-2-2-2). ಎರಡು ಓವರ್ ಮೇಡನ್ ಮಾಡಿದ್ದ ಅವರು ಇನ್ನೆರೆಡು ಓವರ್‌ನಲ್ಲಿ ತಲಾ ಒಂದು ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಆ ದಾಖಲೆಯನ್ನು ಅಕ್ಷಯ್ ಕರ್ನೇವಾರ್ ಮುರಿದಿದ್ದಾರೆ.

ಭಾರತವು ಮುಂದೆ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು ಇಂತಹ ಉದಯೋನ್ಮುಕ ಬೌಲರ್‌ಗಳು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.