ರಿಯಾದ್: ಸೌದಿ ಅರೆಬಿಯಾದಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ಸೌದಿಯಲ್ಲಿರುವ ಕನ್ನಡಿಗರ ನೆರವಿನಿಂದ ಗುರುವಾರ ಬಿಡುಗಡೆಗೊಳಿಸಲಾಗಿದೆ.
ಪಶ್ಚಿಮ ಸಿಕ್ಕಿಂನ ಪೇಕಿ ಬೂಟಿಯ ಮತ್ತು ಮೇನುಕಾ ರಾಯ್ ಬಿಡುಗಡೆಗೊಂಡವರು. ಮನೆ ಕೆಲಸಕ್ಕೆಂದು ಹೋದವರನ್ನು ದೇಶಕ್ಕೆ ವಾಪಸ್ಸಾಗಲು ಬಿಡದೇ ಅಲ್ಲಿ ಗೃಹಬಂಧನದಲ್ಲಿ ಇಟ್ಟು ದುಡಿಸಿಕೊಳ್ಳಲಾಗುತ್ತಿತ್ತು.
ದಾವಣಗೆರೆಯ ಫೈರೂಜಾಬಾನು ಮತ್ತು ತುಮಕೂರಿನ ಸಬಿಹಾ ಅವರು ಕೂಡ ಇದೇ ರೀತಿ ಹೋಗಿ ವಾಪಸ್ ಬರಲಾಗದೇ ಗೃಹಬಂಧನದಲ್ಲಿ ಇದ್ದರು. ಸೌದಿಯಲ್ಲಿದ್ದ ಹಮೀದ್ ಪಡುಬಿದ್ರಿ ಸಹಿತ ಕನ್ನಡಿಗರು ಅವರ ಬಿಡುಗಡೆ ಮಾಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳ ಮಹಿಳೆಯರು ಇದೇ ರೀತಿ ಇರುವುದು ಗೊತ್ತಾಗಿತ್ತು. ಇದೀಗ ಸಿಕ್ಕಿಂನ ಇಬ್ಬರು ಬಿಡುಗಡೆಗೊಂಡಿದ್ದಾರೆ.
ಸೌದಿಯ ಮಾನವಹಕ್ಕುಗಳ ಆಯೋಗ, ಭಾರತ ಸರ್ಕಾರ, ಸೌದಿ ಸರ್ಕಾರದ ಸಹಕಾರದಿಂದಾಗಿ ಅವರನ್ನು ಬಿಡುಗಡೆಗೊಳಿಸಲು ಸಾಧ್ಯವಾಯಿತು. ಇದೇ ರೀತಿ ಭಾರತದ ಇನ್ನೂ ಅನೇಕ ಮಹಿಳೆಯರು ಸಿಲುಕಿಕೊಂಡಿದ್ದು, ಅವರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಹಮೀದ್ ತಿಳಿಸಿದ್ದಾರೆ.