ಬೆಂಗಳೂರು: ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಗರಣಗಳ ಕುರಿತ ಆರೋಪಗಳ ಬಗ್ಗೆ ವಿಚಾರಣೆಗೆ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ವಿಶ್ವವಿದ್ಯಾಲಯದ ಹಗರಣಗಳ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿಗಳು ಪ್ರಕಟವಾಗಿದ್ದವು.
‘ವಿಶ್ವವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿಗೆ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಮೀಸಲಾತಿ ಉಲ್ಲಂಘನೆ ಆರೋಪವಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕೋಶಗಳು ವಿಚಾರಣೆ ನಡೆಸಿ ವರದಿ ನೀಡಬೇಕು. ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು’ ಎಂದೂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಕೆಲವು ಬೋಧಕ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಪ್ರತಿ ಹುದ್ದೆಯನ್ನು ₹ 50 ಲಕ್ಷಕ್ಕೆ ಹರಾಜು ಮಾಡಲಾಗುತ್ತಿದೆ. ಹಣ ಕೊಟ್ಟವರಿಗೆ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತಿದೆಯೆಂಬ ಗಂಭೀರ ಆರೋಪಗಳೂ ಇವೆ. ವಿಶ್ವವಿದ್ಯಾಲಯಗಳು ಹುದ್ದೆಗಳನ್ನು ಹರಾಜಿಗಿಟ್ಟರೆ ಬಡ ಪ್ರತಿಭಾವಂತರು ಆಯ್ಕೆಯಾಗಲು ಸಾಧ್ಯವೆ’ ಎಂದೂ ಪ್ರಶ್ನಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದಲ್ಲಿ ಹಿಂದೆ ನೇಮಕಗೊಂಡ ಬೋಧಕ, ಬೋಧಕೇತರ ಸಿಬ್ಬಂದಿಯ ಪ್ರೊಬೇಷನರಿ ಅವಧಿ ಘೋಷಿಸಲು ಕೂಡಾ ಕಮಿಷನ್ ನಿಗದಿಗೊಳಿಸಲಾಗಿದೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ ಈ ಕುರಿತು ವಿಚಾರಣೆ ನಡೆಸಬೇಕು’ ಎಂದಿರುವ ಸಿದ್ದರಾಮಯ್ಯ, ‘ರಾಜ್ಯದಲ್ಲಿರುವ ಪ್ರತಿಭಾವಂತರ ಪಟ್ಟಿಯನ್ನು ವಿಷಯವಾರು ತಯಾರಿಸಿ ಯುಜಿಸಿ ನಿಯಮಾವಳಿಗಳಂತೆ ನೇಮಕಾತಿ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.