ವಿಜಯನಗರ: ಹಣಕ್ಕೆ ಬೇಡಿಕೆ ಇಟ್ಟಿದ್ದ ಹೊಸಪೇಟೆ ತಾಲ್ಲೂಕು ಕೂಡ್ಲಿಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ ಸ್ಟೆಬಲ್ ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಮಂಜುನಾಥ, ಶರಣಪ್ಪ ಅವರನ್ನು ಅಮಾನತು ಮಾಡಲಾಗಿದೆ. ಕೂಡ್ಲಿಗಿಯ ಈಡಿಗರ ಸಂತೋಷ ಎಂಬುವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಸಂತೋಷ ಅವರು ಆಡಿಯೊ ಸಮೇತ ದೂರು ಕೊಟ್ಟಿದ್ದಾರೆ. ಈ ಸಂಬಂಧ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಹಣ ಕೊಡದಿದ್ದರೆ ಮಟ್ಕಾ ಆಡುವವರನ್ನು ಬಂಧಿಸಲಾಗುವುದು ಎಂದು ಮಂಜುನಾಥ, ಶರಣಪ್ಪ ಅವರು ಸಂತೋಷ ಅವರಿಗೆ ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.