ಬೆಂಗಳೂರು: ಸಿವಿಲ್ ಗುತ್ತಿಗೆದಾರರೊಬ್ಬರನ್ನು ಮಂಚಕ್ಕೆ ಕರೆದ ಮಹಿಳೆ, ಆತನೊಂದಿಗೆ ಖಾಸಗಿ ಕ್ಷಣಗಳನ್ನೂ ಕಳೆದಿದ್ದಳು. ಇದಾದ ಮೇಲೆ ಗುತ್ತಿಗೆದಾರನ ಕೈಗೆ ಅಪರಿಚಿತರು ಪೆನ್ಡ್ರೈವ್ ಕೊಟ್ಟು ಹೋಗಿದ್ದರು. ಆಮೇಲೆ ಹಣದ ಬೇಡಿಕೆ ಶುರು ಮಾಡಿದ್ದಳು
ಗುತ್ತಿಗೆದಾರ, ಅನ್ನಪೂರ್ಣೆಶ್ವರಿನಗರದ ನಿವಾಸಿ ಲೋಹಿತ್ (38) ಎಂಬುವರು 3 ತಿಂಗಳ ಹಿಂದೆ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದಾಗ ಅವರ ಬಳಿ ಬಂದ ಇಬ್ಬರು ಯುವಕರು, ನಮ್ಮ ಬಳಿ ಇರುವ ಹರ್ಬಲ್ ಲೈಫ್ ಉತ್ಪನ್ನಗಳನ್ನು ತೆಗೆದುಕೊಂಡರೆ ನೀವು ಬೇಗ ಸಣ್ಣಗಾಗುತ್ತೀರಿ ಎಂದು ನಂಬಿಸಿದ್ದರು. ನಂತರ ವಿದ್ಯಾ ಎಂಬಾಕೆಯ ಮೊಬೈಲ್ ನಂಬರ್ ಕೊಟ್ಟು ನೀವು ಈ ನಂಬರ್ಗೆ ಕರೆ ಮಾಡಿ ಮಾತನಾಡಿ ಎಂದಿದ್ದರು. ವಿದ್ಯಾಗೆ ಕರೆ ಮಾಡಿದ್ದ ಲೋಹಿತ್, ಹರ್ಬಲ್ ಲೈಫ್ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸಿದ್ದರು. ನಂತರ ಆಗಾಗ ಲೋಹಿತ್ಗೆ ಕರೆ ಮಾಡುತ್ತಿದ್ದ ವಿದ್ಯಾ ಸಲುಗೆ ಬೆಳೆಸಿಕೊಂಡಿದ್ದಳು. ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ಗೆ ಹೋಗಿ ಇಬ್ಬರೂ ಆತ್ಮೀಯವಾಗಿ ಕಾಲ ಕಳೆದಿದ್ದರು. ಆ ವೇಳೆ ವಿದ್ಯಾ ಮಾದಕ ವಸ್ತು ಸೇವಿಸಿ ರೆಸಾರ್ಟ್ ಸಿಬ್ಬಂದಿ ಜತೆ ಜಗಳ ಮಾಡಿದ್ದಳು. ಆಕೆಯನ್ನು ಲೋಹಿತ್ ಸಮಾಧಾನಪಡಿಸಿದರೂ ಆಕೆ ಕೇಳದಿದ್ದಾಗ ವಿದ್ಯಾಳನ್ನು ಅಲ್ಲಿಯೇ ಬಿಟ್ಟು ಲೋಹಿತ್ ಮನೆಗೆ ಬಂದಿದ್ದರು.
ಬಳಿಕ ಲೋಹಿತ್ಗೆ ಕರೆ ಮಾಡಿದ ವಿದ್ಯಾ, ನಾಗರಬಾವಿ ಬಳಿ ಬರುವಂತೆ ಸೂಚಿಸಿದ್ದಳು. ಲೋಹಿತ್ ಆಕೆಯನ್ನು ಭೇಟಿಯಾದಾಗ ತಾವಿಬ್ಬರೂ ರೆಸಾರ್ಟ್ನಲ್ಲಿ ಕಳೆದಿದ್ದ ಖಾಸಗಿ ಫೋಟೊಗಳನ್ನು ಲೋಹಿತ್ಗೆ ವಿದ್ಯಾ ತೋರಿಸಿ 1 ಕೋಟಿ ರೂ. ಕೊಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಳು. ಆತಂಕಗೊಂಡ ಲೋಹಿತ್ ಆರಂಭದಲ್ಲಿ 2 ಲಕ್ಷ ರೂ. ಕೊಟ್ಟಿದ್ದರು. ಇದಾದ ಕೆಲ ದಿನಗಳ ಬಳಿಕ ವಿದ್ಯಾ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ಕೆಲ ದಿನಗಳ ಹಿಂದೆ ಇಬ್ಬರು ಅಪರಿಚಿತ ಹುಡುಗರು ಲೋಹಿತ್ನ ಭೇಟಿಯಾಗಿ ಪೆನ್ಡ್ರೈವ್ ಕೊಟ್ಟು ಇದರಲ್ಲಿ ಇರುವುದನ್ನು ನೋಡಿ ಎಂದು ಹೇಳಿ ಹೋಗಿದ್ದರು. ಪೆನ್ಡ್ರೈನಲ್ಲಿ ಏನಿದೆ ಎಂದು ಪರಿಶೀಲಿಸಿದಾಗ ವಿದ್ಯಾ ಮತ್ತು ಲೋಹಿತ್ ರೆಸಾರ್ಟ್ನಲ್ಲಿ ಕಳೆದಿದ್ದ ಹಲವಾರು ಖಾಸಗಿ ದೃಶ್ಯಗಳಿದ್ದವು. ವಿದ್ಯಾಗೆ ಕರೆ ಮಾಡಿದ ಲೋಹಿತ್ ಈ ಬಗ್ಗೆ ಪ್ರಶ್ನಿಸಿದ್ದರು. 1 ಕೋಟಿ ರೂ. ಕೊಡದಿದ್ದರೆ, ವಿವಾಹವಾಗುವುದಾಗಿ ನಂಬಿಸಿ ವಂಚಿಸಿರುವುದಾಗಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಬೆದರಿಸಿದ್ದಳು.
ಆತಂಕಗೊಂಡ ಲೋಹಿತ್, ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹರ್ಬಲ್ ಲೈಫ್ ಪ್ರಾಡಕ್ಟ್ ಮಾರಾಟ ಮಾಡುವುದಾಗಿ ತನ್ನಂತೆಯೇ ಹಲವು ಪ್ರಭಾವಿಗಳನ್ನು ವಿದ್ಯಾ ಬಲೆಗೆ ಬೀಳಿಸಿದ್ದಾಳೆ ಎಂದು ದೂರಿನಲ್ಲಿ ಲೋಹಿತ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ವಿದ್ಯಾ ಹನಿಟ್ರ್ಯಾಪ್ ನಡೆಸಿರುವುದು ಪತ್ತೆಯಾಗಿತ್ತು. ಕೂಡಲೇ ವಿಜಯನಗರದ ನಿವಾಸಿ ವಿದ್ಯಾ(32)ಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆಕೆಗೆ ಸಹಕರಿಸುತ್ತಿದ್ದ ಇಬ್ಬರು ಹುಡುಗರಿಗೆ ಶೋಧ ಮುಂದುವರಿಸಲಾಗಿದೆ.
ವಿದ್ಯಾ ವಿಐಪಿಗಳನ್ನೇ ಟಾರ್ಗೆಟ್ ಮಾಡಿ ಶ್ರೀಮಂತರು, ರಾಜಕಾರಣಿಗಳು, ಕಾಂಟ್ರಾಕ್ಟರ್ಗಳಿಗೆ ಇದೇ ಮಾದರಿಯಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದಳು. ಹನಿಟ್ರ್ಯಾಪ್ಗೆ ಒಳಗಾದವರಿಂದ ಲಕ್ಷಾಂತರ ರೂ. ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ.